ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :1975ರಲ್ಲಿ ಹುಟ್ಟಿಕೊಂಡ ಕುಂದಾಪುರ ಎಜ್ಯುಕೇಶನ್ ಸೊಸೈಟಿಗೆ ಈಗ ಐವತ್ತರ ಸಂಭ್ರಮ. ಕಳೆದ ಐವತ್ತು ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ಸಂಸ್ಥೆ ಬೆಳೆದಿದೆ. ಎಚ್.ಎಂ.ಎಂ ಆಂಗ್ಲ ಮಾಧ್ಯಮ ಶಾಲೆ, ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಎಜ್ಯುಕೇಶನ್ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೇ ಡಿಸೆಂಬರ್ 18ರಿಂದ ಡಿ.24ರ ತನಕ ಅದ್ದೂರಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಬಿ.ಎಂ.ಎಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರು, ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.
ಅವರು ಕಾಲೇಜಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಡಿ.20ರಂದು ಸುವರ್ಣ ಸೌಧ ಉದ್ಘಾಟನೆ ನಡೆಯಲಿದ್ದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಂಸದರಾದ ಬಿ.ವೈ ರಾಘವೇಂದ್ರ, ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡ, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀನಿವಾಸ ರಾವ್ ಕಸ್ಬೆ ಭಾಗವಹಿಸಲಿದ್ದಾರೆ. ಡಿ.21ರಂದು ಸುವರ್ಣ ಸಂಭ್ರಮ ನಡೆಯಲಿದ್ದು ವಿಶ್ವವಾಣಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ವಿಶ್ವೇಶ್ವರ ಭಟ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಭಾಗವಹಿಸಲಿದ್ದಾರೆ. ಡಿ.22ರಂದು ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಹೊಸದಿಗಂತ ಪತ್ರಿಕೆಯ ಸಿ.ಇ.ಓ ಪಿ.ಎಸ್ ಪ್ರಕಾಶ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭಾಗವಹಿಸಲಿದ್ದಾರೆ. ಡಿ.23 ಮಂಗಳವಾರ ಪೂರ್ವಾಹ್ನ 11.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
12 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಪ್ರಥಮ ಆಂಗ್ಲ ಮಾಧ್ಯಮ ಶಾಲೆ ಇವತ್ತು ಐದು ಸಾವಿರ ವಿದ್ಯಾರ್ಥಿಗಳನ್ನು ಹೊಂದಿದ ಸಂಸ್ಥೆಯಾಗಿ ಬೆಳೆದಿದೆ. ಈ ಬಾರಿಯ ಎಸ್.ಎಸ್.ಎಲ್.ಸಿಯಲ್ಲಿ 9 ರ್ಯಾಂಕ್‍ಗಳನ್ನು ನಮ್ಮ ಸಂಸ್ಥೆಗೆ ಲಭಿಸಿದೆ. ಪಿಯುಸಿಯಲ್ಲೂ ಕೂಡಾ ಉತ್ತಮ ಫಲಿತಾಂಶದೊಂದಿಗೆ ಸಿ.ಎ., ಸಿ.ಎಸ್‍ನಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದೆ. ಡಾ.ಬಿ.ಬಿ ಹೆಗ್ಡೆ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿಯೇ ಅತೀ º
Éಚ್ಚು ವಿದ್ಯಾರ್ಥಗಳನ್ನು ಹೊಂದಿರುವ ಕಾಲೇಜು ಎನ್ನುವ ಹೆಗ್ಗಳಿಕೆ ಪಡೆದಿದೆ. ಕ್ರೀಡಾ ರ್ಯಾಂಕ್‍ನಲ್ಲಿ 6ನೇ ರ್ಯಾಂಕ್ ಪಡೆದಿದೆ ಎಂದರು.
ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ಸಂಸ್ಥೆ ಸದಾ ಬದ್ಧವಿದೆ. ಕಟ್ಟಕಡೆಯ ಮಗುವಿಗೂ ಕೂಡಾ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಹಣ ಗಳಿಸುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿಲ್ಲ. ಪ್ರತೀ ವರ್ಷ 60-70 ಲಕ್ಷ ವಿನಾಯತಿ ನೀಡುತ್ತಿದ್ದೇವೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಊಟ ನೀಡಲಾಗುತ್ತಿದೆ. ನಮ್ಮ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಕಾಲೇಜು ಪ್ರಾಂಶುಪಾಲರಾದ ಡಾ.ಕೆ ಉಮೇಶ ಶೆಟ್ಟಿ, ಆರ್.ಶೆಟ್ಟಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ನವೀನ್ ಕುಮಾರ್ ಶೆಟ್ಟಿ, ಎಚ್.ಎಂ.ಎಂ ಮತ್ತು ವಿ.ಕೆ.ಆರ್ ಶಾಲೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಉಪಸ್ಥಿತರಿದ್ದರು.











