ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಮುದ್ಯತಾ ಪ್ರಸ್ತುತಿಯಲ್ಲಿ ಡಿಸೆಂಬರ್ 20ರಂದು ಸಂಜೆ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವನ್ಷನ್ ಸೆಂಟರ್‍ನಲ್ಲಿ ನಡೆಯಲಿರುವ ಡಾ.ಸಿ ಅಶ್ವಥ್ ಸ್ವರ ಸಂಯೋಜನೆಯ ಗೀತೆಗಳ ಪ್ರಸ್ತುತಿ ‘ಕುಂದಾಪುರದಲ್ಲಿ ಸತ್ಯಾವತಾರ’ ಕಾರ್ಯಕ್ರಮದ ಪೋಸ್ಟರ್ ಅನಾವರಣ ಕಾರ್ಯಕ್ರಮ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವನ್ಷನ್ ಸೆಂಟರ್‍ನಲ್ಲಿ ಶನಿವಾರ ನಡೆಯಿತು.
ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್ ಮಾತನಾಡಿ, ವ್ಯವಹಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಮುದ್ಯತಾ ಸಂಸ್ಥೆ ಜನರಿಗೆ ಹೊಸತನ್ನು ಪರಿಚಯಿಸುವಲ್ಲಿಯೂ ಆಸಕ್ತಿ ವಹಿಸುತ್ತಿದೆ. ಈ ಭಾಗದ ಜನರಿಗೆ ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯವಾದುದು. ಆ ಮೂಲಕ ಸಮುದ್ಯತಾ ಸಂಸ್ಥೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದೆ. ಈ ಕಾರ್ಯಕ್ರಮವನ್ನು ಎಲ್ಲರೂ ನೋಡಿ ಸಂತೋಷ ಪಡಬೇಕು ಎಂದು ಹೇಳಿದರು.
ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಮಾತನಾಡಿ, ಸಿ.ಅಶ್ವಥ್ ಅವರು ಭಾವಗೀತೆಗಳನ್ನು ಹಾಡಲು ಆರಂಭಿಸಿದ ಬಳಿಕ ಭಾವಗೀತೆಗಳ ಬಗ್ಗೆ ಜನರ ಆಕರ್ಷಣೆ ಜಾಸ್ತಿಯಾಗತೊಡಗಿತು. ಅಶ್ವಥ್ ಅವರ ಸ್ವರದಲ್ಲಿ ಕ್ಲಿಷ್ಟವೆನಿಸುವ ಭಾವಗೀತೆಗಳು ಸುಲಲಿತವಾಗಿ, ಜೀವ ಪಡೆದುಕೊಂಡು ಜನಮನದಲ್ಲಿ ಹಾಸುಹೊಕ್ಕಾಯಿತು. ಅಂಥಹ ಅಪರೂಪದ ಕಾರ್ಯಕ್ರಮ ಈ ಭಾಗದಲ್ಲೂ ಆಯೋಜನೆ ಆಗುತ್ತಿರುವುದು ಶ್ಲಾಘನಾರ್ಹ ಎಂದರು.
ಜನಸೇವಾ ಟ್ರಸ್ಟ್ ಗಿಳಿಯಾರು ಇದರ ಅಧ್ಯಕ್ಷರಾದ ವಸಂತ ಗಿಳಿಯಾರ್ ಮಾತನಾಡಿ, ಬೆಂಗಳೂರಿನಲ್ಲಿ ಬಹು ಬೇಡಿಕೆಯ ಕಾರ್ಯಕ್ರಮವಾದ ಸತ್ಯಾವತಾರವನ್ನು ಸಮುದ್ಯತಾ ಸಂಸ್ಥೆಯ ಪ್ರಸ್ತುತಿಯಲ್ಲಿ ಈ ಭಾಗದಲ್ಲೂ ಆಯೋಜನೆ ಆಗುತ್ತಿರುವುದು ಸಂತೋಷದ ವಿಚಾರ ಎಂದರು.
ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮನೋಹರ ಪೂಜಾರಿ, ಸತೀಶ್ ಕುಂದರ್, ಸಮುದ್ಯತಾ ಸಂಸ್ಥೆಯ ಯೋಗೇಂದ್ರ ಕಾಂಚನ್ ಉಪಸ್ಥಿತರಿದ್ದರು.
ರಮೇಶ ಎಚ್.ಕುಂದರ್ ಪ್ರಸ್ತಾವಿಕ ಮಾತುಗಳನ್ನಾಡಿ, ಪರಮಪದ ಎನ್ನುವ ಸಂಸ್ಥೆಯ ಆಯೋಜನೆಯಲ್ಲಿ ಡಾ.ಸಿ. ಅಶ್ವಥ್ ಸ್ವರ ಸಂಯೋಜನೆಯ ಗೀತೆಗಳ ಪ್ರಸ್ತುತಿ ‘ಕುಂದಾಪುರದಲ್ಲಿ ಸತ್ಯಾವತಾರ’. ಗಾಯನದಲ್ಲಿ ರಾಮಚಂದ್ರ ಹಡಪದ, ಎಂ.ಡಿ ಪಲ್ಲವಿ ಹಾಗೂ ಮೇಘನಾ ಕುಂದಾಪುರ ಭಾಗವಹಿಸಲಿದ್ದಾರೆ. ಡಾ.ಸಿ ಅಶ್ವಥ್ ಅವರ ಒಡನಾಟದ ಬಗ್ಗೆ ಬಿ.ಆರ್.ಲಕ್ಷ್ಮಣ ರಾವ್, ಟಿ.ಎಸ್.ನಾಗಾಭರಣ, ಜೋಗಿ ಮಾತುಗಳನ್ನಾಡಲಿದ್ದಾರೆ ಎಂದರು.
ಸಂದೀಪ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.











