ಕುಂದಾಪುರ ಮಿರರ್ ಸುದ್ದಿ…
ಕಿರಿಮಂಜೇಶ್ವರ : ಡಿಸೆಂಬರ್ 13ರಂದು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರದಲ್ಲಿ ‘ ಜನತಾ ಶನಯ – 2K25’ ಎಂಬ ವಾರ್ಷಿಕೋತ್ಸವ ಕಾರ್ಯಕ್ರಮವು ಬಹಳ ವಿನೂತನ ಶೈಲಿಯಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದರಾದ ರಘು ಪಾಂಡೇಶ್ವರ ಅವರು ಉದ್ಘಾಟಿಸಿ ಮಕ್ಕಳ ಭವಿಷ್ಯದ ಕನಸು ಆರಂಭವಾಗುವುದು ಶಾಲೆಯಲ್ಲಿ ಅಂತಹ ಕನಸು ನನಸಾಗಿಸಲು ವೇದಿಕೆಯಾಗಿ ಇರುವುದು ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಹಾದಿ ತಪ್ಪಿಸುತ್ತಿದ್ದು ಈ ನಿಟ್ಟಿನಲ್ಲಿ ಪೋಷಕರು, ಶಾಲೆ ಪ್ರತಿ ಮಗುವಿಗೆ ವೈಯಕ್ತಿಕ ಗಮನ ಹರಿಸಿ ಸ್ಥೈರ್ಯ ತುಂಬಬೇಕು ಎಂದು ಬುದ್ಧಿ ಮಾತನ್ನು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನದಲ್ಲಿದ್ದ ಕಿರಿಮಂಜಿೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೇಖರ್ ಖಾರ್ವಿಯವರು ಮಾತನಾಡಿ ಮಕ್ಕಳ ಸಂಭ್ರಮಕ್ಕೆ ಪ್ರೋತ್ಸಾಹ ನೀಡುವ ಸಾಧನೆಗೆ ದಾರಿ ಮಾಡಿಕೊಡುವ ಸಮಾರಂಭ ವಾರ್ಷಿಕೋತ್ಸವ ಕಾರ್ಯಕ್ರಮ ಅದು ಈ ಶಾಲೆಯಲ್ಲಿ ನೂರು ಶೇಕಡದಷ್ಟು ಕಾರ್ಯರೂಪಕ್ಕೆ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಂತಹ ಇನ್ನೊಬ್ಬರು ಮುಖ್ಯ ಅತಿಥಿಗಳಾದ ಬೈಂದೂರು ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರು ಮಾತನಾಡಿ ಕಲಿಕೆ ಎಂಬುದು ನಿರಂತರವಾದ ಪ್ರಕ್ರಿಯೆಯಾಗಿದ್ದು ವಾರ್ಷಿಕೋತ್ಸವ ಅದಕ್ಕೆ ಅವಕಾಶ ಮಾಡಿ ಕೊಡುತ್ತದೆ. ಶಿಕ್ಷಣದಲ್ಲಿ ದೂರದೃಷ್ಟಿತ್ವ ಹೊಂದಿದ ಗಣೇಶ ಮೊಗವೀರರು ಬಹಳ ವಿಭಿನ್ನವಾಗಿ ಆಯೋಜಿಸಿದ್ದಾರೆ ಎಂದು ವ್ಯವಸ್ಥೆಯನ್ನು ಮೆಚ್ಚಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಂತಹ ಜನತ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಗಣೇಶಮೊಗವೀರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಯಾವೊಂದು ಮಗು ಅವಕಾಶದಿಂದ ವಂಚನೆಯಾಗಬಾರದು ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ಆ ನಿಟ್ಟಿನಲ್ಲಿ ಜನತಾ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತದೆ ಎಂದರು. ಮುಂದಿನ ಶೈಕ್ಷಣಿಕ ಅವಧಿಯಿಂದ ಕೃತಕ ಬುದ್ಧಿಮತ್ತೆ(AI)ಗೆ ಪ್ರಾಶಸ್ತ್ಯ ನೀಡಿ ಪ್ರತ್ಯೇಕ ರೋಬೋಟಿಕ್ ತರಗತಿ ಕೋಣೆಗಳನ್ನು ಸ್ಥಾಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಂತಹ ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನರಸಿಂಹ ದೇವಾಡಿಗ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಸ್ಥೆಯ ಮುಖ್ಯಶಿಕ್ಷಕಿ ದೀಪಿಕಾ ಆಚಾರ್ಯ ಅವರು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು.
ಕಾರ್ಯಕ್ರಮವನ್ನು ಶಾಲೆಯ ವ್ಯಕ್ತಿತ್ವ ವಿಕಸನ ತರಬೇತುದಾರರಾದಂತಹ ಅಭಿಲಾಶ್ ಕ್ಷತ್ರಿಯ ಇವರು ನಿರೂಪಿಸಿ ಸ್ವಾಗತಿಸಿದರು. ಸಂಯೋಜಕರಾದ ಸುಬ್ರಮಣ್ಯ ಮರಾಠೆ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಪೋಷಕರುಗಳು, ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಪ್ರಹಸನಗಳಂತಹ ಸದಭಿರುಚಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.











