ಶ್ರಮಶಕ್ತಿ ನೀತಿಯ ಮೊದಲ ಹೊಡೆತ ಕಟ್ಟಡ ಕಾರ್ಮಿಕರ ಸೆಸ್ ಕಡಿತ – ಶಶಿಧರ ಗೊಲ್ಲ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೇಂದ್ರ ಸರ್ಕಾರದ ಶ್ರಮಶಕ್ತಿ ನೀತಿ -2025 ಮಹತ್ವಾಕಾಂಕ್ಷಿ ಕಾನೂನು ಎಂದು ತನ್ನ ಇಲಾಖೆಗಳ ಮೂಲಕ ಪ್ರಚಾರ ನಡೆಸುತ್ತಿದೆ ಆದರೆ ಕಾರ್ಮಿಕ ಕಾನೂನು ದುರ್ಬಲಗೊಳಿಸುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಶಶಿಧರ ಗೊಲ್ಲ ಅವರು ಹೇಳಿದರು.
ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) 19 ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು.
ಶ್ರಮಶಕ್ತಿ ನೀತಿ ಸಂಘಟಿತ ಕ್ಷೇತ್ರದ ಬಂಡವಾಳಗಾರರಿಗೆ ತುಂಬಾ ಅನುಕೂಲಗಳಿವೆ ಕಾರ್ಮಿಕರ ಶ್ರಮಶಕ್ತಿಯನ್ನು ಮನಸೊ ಇಚ್ಚೆಗಳಿಂದ ಬಳಸಿಕೊಳ್ಳ ಬಹುದು ಮಾತ್ರವಲ್ಲ ಅಸಂಘಟಿತ ಕ್ಷೇತ್ರದ ಕಟ್ಟಡ ಕಾರ್ಮಿಕರ ಮಂಡಳಿಗೂ ಇದರಿಂದ ಅಪಾಯವಿದೆ.ಈಗಾಗಲೇ ಕೇಂದ್ರ ಸರ್ಕಾರ ಮಂಡಳಿಗೆ ಬರುವ ಕಟ್ಟಡ ಸೆಸ್ 50 ಲಕ್ಷಕ್ಕೆ ಹೆಚ್ಚಿಸಿರುವುದು ಕಾನೂನು ತಿದ್ದುಪಡಿಯ ಮೊದಲ ಹೊಡೆತ ಕಟ್ಟಡ ಕಾರ್ಮಿಕರಿಗೆ ಕೇಂದ್ರ ಸರ್ಕಾರ ನೀಡಿದೆ ಎಂದು ತಿಳಿಸಿದರು.
ಕಾರ್ಮಿಕ ವಿರೋಧಿ ನೀತಿಯನ್ನು ಕರ್ನಾಟಕ ಸರ್ಕಾರ ಜಾರಿ ಮಾಡಬಾರದು ಎಂದು ಫೆಬ್ರವರಿ 12 ರಂದು ದೇಶದ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಎಚ್ ನರಸಿಂಹ ಮಾತನಾಡಿ ಸೌಲಭ್ಯಗಳಿಗಾಗಿ ಸಂಘದ ಸದಸ್ಯರಾಗುವ ಕಾರ್ಮಿಕರು ಸೌಲಭ್ಯಗಳನ್ನು ಹೆಚ್ಚಳ ಮಾಡಿಕೊಳ್ಳಲು ಹೋರಾಟ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಆದರೆ ಸರಕಾರದ ನೀತಿಗಳನ್ನು ಅರಿಯಲು ವಿಫಲರಾದರೆ ಪಲಿತಾಂಶ ಬರುವ ಹೋರಾಟ ಆಗುವುದಿಲ್ಲ ಆದುದರಿಂದ ಕಾರ್ಮಿಕರು ಹೆಚ್ಚು ಹೆಚ್ಚು ತಿಳುವಳಿಕೆ ಪಡೆಯಲು ಸಾಧ್ಯವಾಗಬೇಕು ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ,ಬೀಡಿ ಕಾರ್ಮಿಕರ ಸಂಘಟನೆಯ ಬಲ್ಕೀಸ್ ಮಹಾಸಭೆಗೆ ಶುಭಕೋರಿ ಮಾತನಾಡಿದರು.
ಮಹಾಸಭೆಯ ಅಧ್ಯಕ್ಷತೆ ಗೌರವಾಧ್ಯಕ್ಷರಾದ ಚಿಕ್ಕ ಮೊಗವೀರ ಗಂಗೊಳ್ಳಿ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ವಾರ್ಷಿಕ ಕರಡು ವರದಿ ಮಂಡಿಸಿದರು.
ಕೋಶಾಧಿಕಾರಿ ಅನುಪಸ್ಥಿತಿಯಲ್ಲಿ ಅಧ್ಯಕ್ಷರಾದ ಸುರೇಶ್ ಕಲ್ಲಾಗರ ಲೆಕ್ಕ ಪತ್ರ ಮಂಡಿಸಿದರು.
ವರದಿ ಲೆಕ್ಕ ಪತ್ರ ಮೇಲೆ ಚರ್ಚೆ ನಡೆಸಿ ಅಂಗೀಕಾರ ಮಾಡಲಾಯಿತು.
25 ಮಂದಿಯ ನೂತನ ಪದಾಧಿಕಾರಿಗಳ ಸಮಿತಿ ಮಹಾಸಭೆ ಆಯ್ಕೆ ಮಾಡಿತು.
ನೂತನ ಅಧ್ಯಕ್ಷರಾಗಿ ಚಿಕ್ಕ ಮೊಗವೀರ ಗಂಗೊಳ್ಳಿ, ನೂತನ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಗರ, ನೂತನ ಕೋಶಾಧಿಕಾರಿಯಾಗಿ ಚಂದ್ರಶೇಖರ ವಿ ಆಯ್ಕೆಯಾದರು.
ಸಂತೋಷ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಶಶಿಕಾಂತ್ ಎಸ್ ಕೆ ಸ್ವಾಗತಿಸಿದರು.ವಿಜೇಂದ್ರ ಅಗಲಿದ ಕಾರ್ಮಿಕರಿಗೆ ವಿವಿಧ ಗಣ್ಯರಿಗೆ ಶ್ರದ್ಧಾಂಜಲಿ ಠರಾವು ಮಂಡಿಸಿದರು.
ಫೆಬ್ರವರಿ 12 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲು ನಿರ್ಣಯ ಮಂಡಿಸಲಾಯಿತು.
ಪ್ರಧಾನ ಕಾರ್ಯದರ್ಶಿ ವಂದನಾರ್ಪಣೆ ಮಾಡಿದರು.











