ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ.)ಅಂಪಾರು ಇವರ ಆಶ್ರಯದಲ್ಲಿ ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮತ್ತು ಸಂಜಯ ಗಾಂಧಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವು ಜನವರಿ 13ರಂದು ಶಾಲಾ ಸಭಾಂಗಣದಲ್ಲಿ ಅತ್ಯಂತ ಸಡಗರದಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀರಾಮ್ ಕ್ಯಾಶ್ಯೂಸ್ ಅಂಪಾರು ಇಲ್ಲಿನ ರಂಜನಾ ರಾಘವೇಂದ್ರ ಪ್ರಭು ಹಾಗೂ ಅಂಪಾರು ರೋಟರಿ ಕ್ಲಬ್ ಅಧ್ಯಕ್ಷರಾದ ರೋ| ಗುರುರಾಜ್ ಶೆಟ್ಟಿ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಾಧನೆಯನ್ನು ಶ್ಲಾಘಿಸಿದ ರಂಜನಾ ರಾಘವೇಂದ್ರ ಪ್ರಭು ಅವರು ಶಿಸ್ತು ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೀವನದಲ್ಲಿ ಕೇವಲ ಅಂಕಗಳಷ್ಟೇ ಮುಖ್ಯವಲ್ಲ, ಉತ್ತಮ ಸಂಸ್ಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೊಟೇರಿಯನ್ ಗುರುರಾಜ್ ಶೆಟ್ಟಿ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು .
ವೇದಿಕೆಯಲ್ಲಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಸಂಜಯ ಗಾಂಧಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಉದಯ ಕುಮಾರ್ ಹಾಗೂ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಉಪಸ್ಥಿತರಿದ್ದರು.
ಶಿಕ್ಷಕಿ ಶೈಲಜಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











