ಬೈಂದೂರು :ಗ್ರಾಮೋತ್ಸವದಿಂದ ಗ್ರಾಮಾಭಿವೃದ್ದಿಯ ಕಲ್ಪನೆ ಸಾಕಾರ: ಡಾ.ಡಿ.ವೀರೇಂದ್ರ ಹೆಗ್ಡೆ

0
607

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಲೆ, ಸಾಂಸ್ಕ್ರತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದಿರುವ ಬೈಂದೂರಿನಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಹಲವು ಧಾರ್ಮಿಕ ಕ್ಷೇತ್ರಗಳಿವೆ. ಹಿಂದೆ ಕುಗ್ರಾಮವಾಗಿದ್ದ ಬೈಂದೂರು ಇಂದು ಬೆಳೆದು ನಿಂತಿದೆ. ಗ್ರಾಮೋತ್ಸವದಿಂದ ಗ್ರಾಮಾಭಿವೃದ್ದಿಯ ಕಲ್ಪನೆ ಸಾಕಾರವಾಗಿದೆ. ಧರ್ಮಸ್ಥಳ ಕ್ಷೇತ್ರವು ಗ್ರಾಮಾಭಿವೃದ್ದಿಗೆ ಬೆಂಗಾವಲಾಗಿ ನಿಂತಿದ್ದು 131 ಕೋಟಿ ರೂಗಳನ್ನು ಬ್ಯಾಂಕ್ ಗಳ ಮೂಲಕ ನೇರ ಸಾಲವಾಗಿ ನೀಡಿದೆ. ಗ್ರಾಮಾಭಿವೃದ್ದಿ ಯೋಜನೆಯಡಿ 5 ಕೋಟಿ 5 ಲಕ್ಷ ರೂ.ಗಳನ್ನು ಲಾಭಾಂಶವಾಗಿ ಯೋಜನೆಯ ಫಲನಾಭವಿಗಳಿಗೆ ನೀಡಲಾಗಿದೆ. ಸುಮಾರು 200ಕ್ಕೂ ಮಿಕ್ಕಿ ಮದ್ಯವ್ಯಸನಿಗಳು ಮದ್ಯಪಾನದಿಂದ ಮುಕ್ತರಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಹೇಳಿದರು.

ಬೈಂದೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬೈಂದೂರು ಉತ್ಸವ -2026 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯವಹಾರದಲ್ಲಿ ನಿಯತ್ತಿನಿಂದಿರುವುದು ಧಾರ್ಮಿಕತೆ ಹೊರತು ಗೊಡ್ಡು ಸಂಪ್ರದಾಯಗಳಲ್ಲ. ಗ್ರಾಮೋತ್ಸವಗಳು ಒಂದು ದಿನಕ್ಕೆ ಸೀಮಿತವಾಗದೆ ಶಾಶ್ವತ ಜ್ಯೋತಿಯಾಗಿ ಬೆಳಗಬೇಕು. ಸಮಾಜದಲ್ಲಿ ಸಂಸ್ಕಾರ ಮತ್ತು ಸಂಘಟನೆ ಬಹು ಮುಖ್ಯ. ಸರಕಾರದ ಕಾರ್ಯಕ್ರಮಗಳು ಜನರಿಗೆ ತಲುಪಲು ಗ್ರಾಮೋತ್ಸವಗಳು ಸಹಕಾರಿಯಾಗಿದ್ದು ಇದೊಂದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿದು ಜನರ ಬದುಕು ಹಸನಾಗಲಿ ಎಂದು ಹಾರೈಸಿದರು.

Click Here

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಬೈಂದೂರು ಉತ್ಸವದ ಪರಿಕಲ್ಪನೆ ಚೆನ್ನಾಗಿದೆ. ಇಂತಹ ಉತ್ಸವಗಳನ್ನು ಕನಿಷ್ಟ 2-3 ವರ್ಷಗಳಿಗೊಮ್ಮೆಯಾದರೂ ಆಯೋಜಿಸಿದಾಗ ಜನರಿಗೆ ಸರಕಾರದ ಕಾರ್ಯಕ್ರಮಗಳ ಅರಿವು ಆಗುವ ಜೊತೆಗೆ ಅದರ ಲಾಭ ಕೂಡಾ ದೊರೆಯುತ್ತದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಇಂತಹ ಗ್ರಾಮೋತ್ಸವಗಳು ನಡೆದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮತ್ತು ಅವುಗಳಿಂದಾಗುವ ಪ್ರಯೋಜನಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ನಗರೀಕರಣ ಹೆಚ್ಚಾಗಿದ್ದು ಈ ರೀತಿಯ ಕಾರ್ಯಕ್ರಮಗಳಿಂದಾಗಿ ಅಬಾಲವೃದ್ದರಾದಿಯಾಗಿ ಎಲ್ಲರಿಗೂ ಗ್ರಾಮೀಣ ಕುಲಕಸುಬುಗಳ ಪರಿಚಯವಾಗುತ್ತದೆ ಎಂದ ಅವರು, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳು ಮಹಿಳಾ ಸಬಲೀಕರಣ ಕೇಂದ್ರಿತವಾಗಿದೆ. ಕೊಲ್ಲೂರು ಹಾಗೂ ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಚರ್ಚೆ ನಡೆದಿದ್ದು, ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ ಎಂದರು.

ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಬೈಂದೂರು ಉತ್ಸವ ಇದು ರಾಜ್ಯದಲ್ಲಿಯೇ ಅತ್ಯಂತ ವಿಭಿನ್ನ ಪರಿಕಲ್ಪನೆಯ ಮೂಲಕ ಕಾರ್ಯಕ್ರಮ ಸಂಯೋಜಿಸಿ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ನೇರವಾಗಿ ತಲುಪಿಸುವ ಐತಿಹಾಸಿಕ ಕಾರ್ಯಕ್ರಮ. ನಂಜುಡಪ್ಪನವರ ವರದಿಯ ಪ್ರಕಾರ ಬೈಂದೂರು ಅತ್ಯಂತ ಹಿಂದುಳಿದ ತಾಲೂಕಾಗಿತ್ತು. ಬೈಂದೂರು ಉತ್ಸವದಂತಹ ಕಾರ್ಯಕ್ರಮಗಳು ತಾಲೂಕಿನ ಅಭಿವೃದ್ದಿಗೆ ಕಾರಣವಾಗಿವೆ. ಬೈಂದೂರಿನಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ರೈಲು, ರಸ್ತೆ, ಜಲಸಾರಿಗೆ ಸೇರಿದಂತೆ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಗೊಳಿಸಿ ತಾಲೂಕಿನ ಪ್ರವಾಸೋದ್ಯಮಕ್ಕೆ ಬಲ ತುಂಬಿ ಪ್ರವಾಸಿಗರನ್ನು ಸೆಳೆಯಲು ಬೈಂದೂರು ಉತ್ಸವದಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದ ಅಭಿವೃದ್ದಿಯಿಂದ ಕ್ಷೇತ್ರದ ಅಭಿವೃದ್ದಿ ಎನ್ನುವ ಧ್ಯೇಯದೊಂದಿಗೆ ತಾಲೂಕಿನ 43 ಗ್ರಾಮಗಳಲ್ಲಿಯೂ ಗ್ರಾಮೋತ್ಸವಗಳನ್ನು ಆಯೋಜಿಸಿ ಸರಕಾರದ ಎಲ್ಲ ಇಲಾಖೆಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಿದಾಗ ಅದಕ್ಕೆ ಅಭೂತಪೂರ್ವ ಜನಸ್ಪಂದನೆ ದೊರೆಯಿತು. ಗ್ರಾಮೀಣ ಪ್ರದೇಶದ ಅಭಿವೃದ್ದಿ ಮತ್ತು ಮಹಿಳಾ ಸಬಲೀಕರಣದ ಗುರಿಯೊಂದಿಗೆ, ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮುತುವರ್ಜಿ ಹಾಗೂ ಮಾರ್ಗದರ್ಶನದಿಂದ ಎಲ್ಲ ಗ್ರಾಮೋತ್ಸವಗಳು ಅತ್ಯಂತ ಯಶಸ್ವಿಯಾಗಿವೆ. ತಾಲೂಕಿನ ಎಲ್ಲ ಗ್ರಾಮಗಳ ಜನರ ಸಮಸ್ಯೆಗಳು ಪರಿಹಾರ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಗ್ರಾಮೋತ್ಸವಗಳನ್ನು ಆಯೋಜಿಸುತ್ತಿದ್ದು, ಇದಕ್ಕೆ ಸಚಿವರ, ಜಿಲ್ಲಾಡಳಿತದ, ಸರಕಾರದ ಎಲ್ಲ ಇಲಾಖೆಗಳ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸಂಜೀವಿನಿ ಒಕ್ಕೂಟಗಳ ಬೆಂಬಲ ದೊರಕಿದೆ. ಗ್ರಾಮಗಳು ಜನರ ಜೀವನದ ಬಹು ಮುಖ್ಯ ಅಂಗವಾಗಿದ್ದು, ಗ್ರಾಮಗಳು ಅಭಿವೃದ್ದಿ ಹೊಂದಿದಾಗ ದೇಶ ಅಭಿವೃದ್ದಿ ಹೊಂದುತ್ತದೆ ಎಂದ ಅವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ ಕುಮಾರ್ ಕೊಡ್ಗಿ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಕೊಲ್ಲೂರು ದೇವಳದ ಪ್ರಧಾನ ಅರ್ಚಕರಾದ ಕೆ.ರಾಮಚಂದ್ರ ಅಡಿಗ, ಕೆ.ಎನ್ ಶ್ರೀಧರ ಅಡಿಗ, ಕೆ.ಎನ್.ಸುಬ್ರಹ್ಮಣ್ಯ ಅಡಿಗ, ಮುಖಂಡರಾದ ಅನಿತಾ ಆರ್.ಕೆ, ಅನೀಲ್ ಕುಮಾರ್ ಬಿ.ಸಿ ಟ್ರಸ್ಟ್ ಧರ್ಮಸ್ಥಳ, ಉದ್ಯಮಿ ವೆಂಕಟೇಶ ಕಿಣಿ ಬೈಂದೂರು ಮತ್ತಿತರರು ಉಪಸ್ಥಿತರಿದ್ದರು.

ಪ್ರಣುತ್ ಗಾಣಿಗ, ಕೆ.ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here