ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎನ್ನುವ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ತಾಲ್ಲೂಕಿನ ಮಾರಣಕಟ್ಟೆಯ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಮಕರ ಸಂಕ್ರಮಣ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದುಕೊಂಡರು.










ಉಡುಪಿ ಜಿಲ್ಲೆಯ ಪ್ರಸಿದ್ಧ ಉತ್ಸವಗಳಲ್ಲಿ ಒಂದಾಗಿರುವ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರದ ಉತ್ಸವಕ್ಕಾಗಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಬಂದು ದೇವರ ದರ್ಶನ ಪಡೆದು, ಹೂ ಹಣ್ಣು ಕಾಯಿ ನೆರವೇರಿಸಿ, ಹರಕೆ ಸಲ್ಲಿಸಿರು. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯಗೊಳಿಸಲಾಗಿತ್ತು.
ಬೆಳಿಗ್ಗೆ ದೇವಸ್ಥಾನದಲ್ಲಿ ಅರ್ಚಕ ಶ್ರೀಧರ ಮಂಜರ ನೇತ್ರತ್ವದಲ್ಲಿ ಮಂಗಳಾರತಿ ಹಾಗೂ ಇತರ ಧಾರ್ಮಿಕ ವಿಧಿಗಳನ್ನು ವಿದ್ಯುಕ್ತವಾಗಿ ಆಚರಿಸಲಾಯಿತು. ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ, ದೇವಸ್ಥಾನದ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಶೆಟ್ಟಿ, ಉದ್ಯಮಿ ಕೃಷ್ಣಮೂರ್ತಿ ಮಂಜ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಸದಸ್ಯ ಡಾ.ಅತುಲಕುಮಾರ ಶೆಟ್ಟಿ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ನಿವೃತ್ತ ಕೃಷಿ ಇಲಾಖೆಯ ಅಧಿಕಾರಿ ರಘುರಾಮ ಶೆಟ್ಟಿ , ದೇಗುಲದ ಪಾತ್ರಿಗಳಾದ ಶ್ರೀಧರ ಮಾರ್ಡಿ ಹಾಗೂ ಗಣಪಯ್ಯ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಇದ್ದರು.
ಕೊಲ್ಲೂರು ಪೊಲೀಸ್ ಠಾಣೆಯ ಎಸ್.ಐ ನಾಸೀರ್ ಹುಸೇನ್ ಅವರ ನೇತ್ರತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.











