ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅಪರೇಷನ್ ಪರಾಕ್ರಮದಲ್ಲಿ ಗಂಭೀರವಾಗಿ ಗಾಯಗೊಂಡ ನಿವೃತ್ತ ಯೋಧನಿಗೆ ಸಾಸ್ತಾನ ಟೋಲ್ ವಿನಾಯಿತಿ ನಿರಾಕರಿಸಿ ಅವಮಾನಿಸಿದ ಘಟನೆಗೆ ಭಾನುವಾರ ರಾತ್ರಿ ನಡೆದಿದೆ. ಈ ಸಂಬಂಧಿಸಿದಂತೆ ಮಾಜಿ ಸೈನಿಕರ ಸಂಘ ಉಡುಪಿ ಹಾಗೂ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾಸ್ತಾನ ಟೋಲ್ ಪ್ಲಾಜಾ ಬಳಿ ಸೋಮವಾರ ರಸ್ತೆ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿತು.
ಈ ಸಂಬಂಧ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸಾಸ್ತಾನ ಇದರ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಮಾಜಿ ಸೈನಿಕನ ಮೇಲೆ ಅಮಾನವೀಯವಾಗಿ ಟೋಲ್ ಗೇಟ್ ಸಿಬ್ಬಂದಿ ವರ್ತಿಸಿದ್ದಾರೆ. ಈ ಕುರಿತು ಈಗಾಗಲೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ, ನಿವೃತ್ತ ಸೈನಿಕ ಶ್ಯಾಮರಾಜ್ ಅವರು 21ನೇ ಪ್ಯಾರಾ ಸ್ಪೆಷಲ್ ಪೋರ್ಸ್‍ನ ಪ್ಯಾರಾಟೂಪರ್ ಆಗಿದ್ದು, ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಅವರ ಪತ್ನಿ ಮಿಲಿಟರಿ ನರ್ಸಿಂಗ್ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೋಸ್ಟಿಂಗ್ ಸಂಬಂಧಿತ ಪ್ರಯಾಣದ ವೇಳೆ ಆರ್‍ಎಂಎ ವತಿಯಿಂದ ನೀಡಲಾಗಿದ್ದ ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದರೂ ಸಿಬ್ಬಂದಿ ನಿರಾಕರಿಸಿದ್ದಾರೆ ಕಾರಿನಿಂದ ವಿಲ್ಹ್ ಚೇರ್‍ನಲ್ಲಿ ಸಮಯ ವ್ಯರ್ಥ ಮಾಡಿ ಅವಮಾನಗೈದಿದ್ದಾರೆ ಎಂದು ಹೇಳಿದರು.
ಘಟನೆಯ ಹಿನ್ನೆಲೆ
ಗಣರಾಜ್ಯೋತ್ಸವ ಮುನ್ನದಿನ ಸಾಸ್ತಾನ ಟೋಲ್ ಪ್ಲಾಜಾದಲ್ಲಿ, ಯುದ್ಧದಲ್ಲಿ ಗಾಯಗೊಂಡ ನಿವೃತ್ತ ಸೈನಿಕ ಶ್ಯಾಮರಾಜ್ ಅವರಿಗೆ ಅಧಿಕೃತ ಟೋಲ್ ವಿನಾಯಿತಿ ಪತ್ರವಿದ್ದರೂ ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಾಸ್ತಾನ ಟೋಲ್ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಶ್ಯಾಮರಾಜ್ ಅವರು ತಮ್ಮ ಬಳಿ ಇದ್ದ ಅಧಿಕೃತ ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದರೂ, ಸಿಬ್ಬಂದಿ ಅದನ್ನು ಒಪ್ಪದೇ ಟೋಲ್ ಪಾವತಿಸುವಂತೆ ಒತ್ತಾಯಿಸಿದ್ದಾರೆ. ದೇಶದ ಅನೇಕ ಟೋಲ್ ಪ್ಲಾಜಾಗಳಲ್ಲಿ ಈ ವಿನಾಯಿತಿ ಮಾನ್ಯವಾಗುತ್ತಿದ್ದರೂ, ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಮಾತ್ರ ಸಮಸ್ಯೆ ಎದುರಾಗಿದೆ ಎಂದು ಶ್ಯಾಮರಾಜ್ ದೂರಿದ್ದಾರೆ.
ಆಪರೇಶನ್ ಪರಾಕ್ರಮ್ ಸಂದರ್ಭದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಗಿಸಿ ವಾಪಸ್ಸು ಬರುತ್ತಿದ್ದಾಗ ಶ್ಯಾಮರಾಜ್ ಅವರ ವಾಹನ ಲ್ಯಾಂಡ್‍ಮೈನ್ ಸ್ಫೋಟಕ್ಕೆ ಒಳಗಾಗಿತ್ತು. ಈ ಭೀಕರ ದುರಂತದಲ್ಲಿ 15 ಸೈನಿಕರು ಹುತಾತ್ಮರಾಗಿದ್ದು, ಬದುಕುಳಿದ ಇಬ್ಬರಲ್ಲಿ ಶ್ಯಾಮರಾಜ್ ಒಬ್ಬರು. ಗಂಭೀರ ಗಾಯಗಳಿಂದಾಗಿ ಅವರು ಸಂಪೂರ್ಣ ವಿಕಲಾಂಗರಾಗಿದ್ದಾರೆ.
ದೇಶಕ್ಕಾಗಿ ಪ್ರಾಣಪಣ ತೊಟ್ಟು ಹೋರಾಡಿದ ಸೈನಿಕನಿಗೆ ಈ ರೀತಿಯ ವರ್ತನೆ ಅತ್ಯಂತ ಖಂಡನೀಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್ ಭೇಟಿ ನೀಡಿದ್ದು, ಪ್ರತಿಭಟನಾಕಾರರನ್ನು ಮನವೊಲಿಸಲಿದ್ದಾರೆ. ಸಾಸ್ತಾನ ಟೋಲ್ ಗೇಟ್ ನ ವ್ಯವಸ್ಥಾಪಕ ರಾಜಕುಮಾರ್ ಸ್ಥಳಕ್ಕೆ ಆಗಮಿಸಿ ಕ್ಷಮೆ ಕೇಳಿದ್ದು ಇದನ್ನು ಮರುಕಳಿಸದಂತೆ ನೋಡಿಕೊಳುವುದಾಗಿ ಭರವಸೆ ನೀಡಿ ಉಡುಪಿ ಡಿವೈಎಸ್ ಪಿ ಕಛೇರಿಯಲ್ಲಿ ಮಂಗಳವಾರ ಯೋಧರ ಹಾಗೂ ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರ ಸಭೆ ಕರೆಯುವ ಭರವಸೆಯ ಹಿನ್ನಲ್ಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟಿತು.
ಸಾಸ್ತಾನದಲ್ಲಿ ಟೋಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಇಂಗ್ಲೆಂಡ್ ಮೂಲದ ಕೆ.ಕೆ ಆರ್ ಕಂಪನಿ ಪ್ರಸ್ತುತ ನಿವೃತ್ತ ಯೋಧರನ್ನು ಅವಮಾನಿಸಿದ್ದಲ್ಲದೆ ಸ್ಥಳೀಯ ವಾಹನಗಳಿಗೂ ಸಮಸ್ಯೆ ನೀಡುತ್ತಿದೆ. ಹೆದ್ದಾರಿ ದಾರಿದೀಪ, ಚರಂಡಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪ್ರಸ್ತುತ ಎದುರಿಸುತ್ತಿದ್ದು ನಮ್ಮ ಕಣ್ಮಂದಿದೆ ಈ ಬಗ್ಗೆ ಮಾಹಿತಿ ನೀಡಿದರೆ ನಿರ್ಲಕ್ಷೀಯ ಧೋರಣೆ ತಳೆಯುತ್ತಿದೆ ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕಿದೆ ಎಂದು ಪ್ರತಿಭಟನೆಯಲ್ಲಿ ಹೆದ್ದಾರಿ ಸಮಿತಿಯ ಮಾಜಿ ಅಧ್ಯಕ್ಷ
ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ ಚಂದ್ರ ಅಮೀನ್, ಕಾರ್ಯದರ್ಶಿ ಅಶೋಕ್ ಅಚಾರ್ಯ, ಕೋಶಾಧಿಕಾರಿ ಸುರೇಶ್ ಸಿ ರಾವ್ , ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಐರೋಡಿ ವಿಠ್ಠಲ ಪೂಜಾರಿ, ನಾಗರಾಜ್ ಗಾಣಿಗ,ದಿನೇಶ್ ಗಾಣಿಗ ಮತ್ತಿತರರು ಇದ್ದರು.













