
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಪ್ರಗತಿಪರಿಶೀಲನಾ ಸಭೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪಂಚಗ್ಯಾರಂಟಿ ಯೋಜನೆ ಯಶಸ್ಸಿನಿಂದ ನಡೆಯುತ್ತಿದ್ದು ಈ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 10,06,98,000, ಒಟ್ಟು ಈ ತನಕ 235,26,92,000, ಗೃಹಜ್ಯೋತಿ ಯೋಜನೆಯಡಿ ಈ ತಿಂಗಳು 4,54,14,271, ಒಟ್ಟು 118,94,05,683, ಅನ್ನಭಾಗ್ಯ ಯೋಜನೆಯಲ್ಲಿ 2,57,85,945, ಒಟ್ಟು 53,31,67,379, ಯುವನಿಧಿಯಲ್ಲಿ ಒಟ್ಟು 2,70,76,500, ಶಕ್ತಿ ಯೋಜನೆಯಲ್ಲಿ ಈ ತಿಂಗಳು 3,06,71,680, ಒಟ್ಟು 70,78,08,833 ಬಿಡುಗಡೆಯಾಗಿದೆ. ಈ ತಿಂಗಳಲ್ಲಿ ಒಟ್ಟು ರೂ.20,25,69,896, ಇಲ್ಲಿಯ ತನಕ ಒಟ್ಟು 481,01,50,395 ಬಿಡುಗಡೆಯಾಗಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜ.28ರಂದು ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ಯಾರಂಟಿ ಸಮಿತಿ ಸದಸ್ಯ ಕೋಣಿ ನಾರಾಯಣ ಆಚಾರ್ ಮಾತನಾಡಿ, ಹಳೆಯ ಬಸ್‍ಗಳನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತಿದೆ. ಕಂಡಿಷನ್ ನೋಡಿಕೊಂಡು ಬಸ್ ಓಡಿಸಬೇಕು, ಪ್ರಯಾಣಿಕರ ಸುರಕ್ಷತೆ ಮುಖ್ಯ ಎಂದರು.
ಕೆಎಸ್.ಆರ್.ಟಿ.ಸಿಯಲ್ಲಿನ ಜನರ ಬೇಡಿಕೆ, ಸಮಸ್ಯೆ, ಅವಶ್ಯಕತೆಗಳನ್ನು ಸಚಿವರು ಬಂದಾಗ ಸಚಿವರ ಮುಂದೆ ಅಧಿಕಾರಗಳು ಹೇಳಬೇಕಾಗುತ್ತದೆ ಎಂದು ಸದಸ್ಯರ ಹೇಳಿದರು.
ಜಹೀರ್ ಆಹಮ್ಮದ್ ಗಂಗೊಳ್ಳಿ ಮಾತನಾಡಿ, ಕೋಟ ಮೂರ್‍ಕೈಯಲ್ಲಿ ಕೆಎಸ್.ಆರ್.ಟಿಸಿ ಬಸ್‍ಗಳಿಗೆ ನಿಲುಗಡೆ ಕೊಡಬೇಕು. ಈಗ ಅಲ್ಲಿ ನಿಲುಗಡೆ ಕೊಡುತ್ತಿಲ್ಲ. ಹಾಗಾಗಿ ನಿತ್ಯ ಕೋಟಕ್ಕೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎಂದರು. ಈಗ ಅಲ್ಲಿ ಗ್ರಾಮಾಂತರ ಸಾರಿಗೆ ಬಸ್ ಗಳನ್ನು ನಿಲ್ಲಿಸಲಾಗುತ್ತಿದೆ. ವಾಯುವ್ಯ ಸಾರಿಗೆ ಬಸ್‍ಗಳನ್ನು ನಿಲ್ಲಿಸಲಾಗುತ್ತಿಲ್ಲ ಎಂದರು.
ಕೆಎಸ್.ಆರ್.ಟಿಸಿ ಬಸ್‍ನ ಕೆಲವು ನಿರ್ವಹಕರು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವಂತೆ ಮಾಡುತ್ತಾರೆ. ಇದನ್ನು ಅಧಿಕಾರಿಗಳು ಗಮನಿಸಬೇಕು ಎಂದು ಸದಸ್ಯ ಅರುಣ್ ಹೇಳಿದರು. ಇದಕ್ಕೆ ಉತ್ತರಿಸಿದ ಡಿಪೋ ವ್ಯವಸ್ಥಾಪಕರು, ಸೂಕ್ತ ತಪಾಸಣಾಧಿಕಾರಿಗಳು ತಪಾಸಣೆ ಮಾಡುತ್ತಿರುತ್ತಾರೆ. ಲೋಪವಾದರೆ ನಿರ್ವಹಕರಿಗೆ ಮೂರು ತಿಂಗಳುಗಳ ಅಮಾನತು ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ 13 ಅರ್ಜಿ ಆಧಾರ್ ಮ್ಯಾಪಿಂಗ್ ಸಮಸ್ಯೆ ಬಗ್ಗೆ ಹರಿಪ್ರಸಾದ್ ಶೆಟ್ಟಿ ಅವರು ಅಧಿಕಾರಿಗಳ ಗಮನ ಸಳೆದರು. ಗೃಹ ಲಕ್ಷ್ಮೀ ಯೋಜನೆಯಲ್ಲಿ ಹೊಸದಾಗಿ ಅರ್ಜಿ ಹಾಕಿದರೆ ಅರ್ಜಿ ಹಾಕಿದ ಮುಂದಿನ ತಿಂಗಳಿನಿಂದ ಹಣ ಬರುತ್ತದೆ. ಅಕ್ಟೋಬರ್ ತಿಂಗಳಲ್ಲಿ 14 ಹೊಸ ನೋಂದಣಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈಗ ವಿದ್ಯುತ್ ಕಡಿತ ಸಮಸ್ಯೆ ಜಾಸ್ತಿಯಾಗಿದೆ. ಮಂಗಳವಾರ ಮಾತ್ರವಲ್ಲದೆ ಬೇರೆ ದಿನಗಳು ಕೂಡಾ ಪವರ್ ಕಟ್ ಮಾಡಲಾಗುತ್ತಿದೆ. ದುರಸ್ತಿ, ಮಾರ್ಗದ ಮರಗಳ ಗೆಲ್ಲು ತೆರವು ಕಾರ್ಯವನ್ನು ಮಂಗಳವಾರಕ್ಕೆ ಹೊಂದಾಣಿಕೆ ಮಾಡಿಕೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಎಚ್.ಹರಿಪ್ರಸಾದ್ ಶೆಟ್ಟಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋಣಿ ನಾರಾಯಣ ಆಚಾರ್, ಅರುಣ್ ಈ ಬಗ್ಗೆ ಚರ್ಚಿಸಿದರು.
ಬಿಪಿಎಲ್ ಪಡಿತರ ಚೀಟಿ ಪರಿಶೀಲನೆಗೆ ಎಷ್ಟು ಬಾಕಿ ಎಂದು ಅಧ್ಯಕ್ಷರು ಪ್ರಶ್ನಿಸಿದರು. ತಾಲೂಕಿನಲ್ಲಿ ಇನ್ನೂ 1000 ಪಡಿತರ ಚೀಟಿ ಪರಿಶೀಲನೆಗೆ ಬಾಕಿ ಇದೆ. ಇಕೆವೈಸಿ1035 ಬಾಕಿ ಇದೆ ಎಂದರು.
ಅನ್ನಭಾಗ್ಯ ಯೋಜನೆಯಲ್ಲಿ ಕುಚಲಕ್ಕಿ ಬರುತ್ತಿದ್ದು ಕರಾವಳಿ ಭಾಗದಲ್ಲಿ ಈ ಕುಚಲಕ್ಕಿ ಊಟ ಮಾಡುವವರು ಕಡಿಮೆ. ಆದ್ದರಿಂದ ಈ ಹಿಂದೆ ನೀಡುತ್ತಿರುವ ಬೆಳ್ತಿಗೆ ಅಕ್ಕಿಯನ್ನೇ ನೀಡಬೇಕು ಎಂದು ಸದಸ್ಯರು ಹೇಳಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ ಸ್ವಾಗತಿಸಿ, ವಂದಿಸಿದರು.










