ಕೊರಗ ಭೂಹೀನ ಕುಟುಂಬಗಳಿಗೆ ಭೂಮಿ ಮಂಜೂರಾತಿ ವಿಳಂಬಕ್ಕೆ ಆಕ್ರೋಶ

0
486

Click Here

Click Here

ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಎಚ್ಚರಿಕೆ – ಶ್ರೀಧರ ನಾಡ

ಕುಂದಾಪುರ ಮಿರರ್ ಸುದ್ದಿ…
ಉಡುಪಿ :ಕುಂದಾಪುರ ತಾಲ್ಲೂಕಿನ ಆಲೂರು ಗ್ರಾಮದ ಸರ್ವೇ ನಂ.153ರಲ್ಲಿರುವ ಸರಕಾರಿ ಡಿ.ಸಿ. ಮನ್ನಾ ಭೂಮಿಯನ್ನು ಭೂಹೀನ ಕೊರಗ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ತಕ್ಷಣ ಮಂಜೂರಾತಿ ಮಾಡುವಂತೆ ಒತ್ತಾಯಿಸಿ, ಕೊರಗ ಸಮುದಾಯದ ನಿಯೋಗವು ಇಂದು ಉಡುಪಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿಗಳಿಗೆ ವಿಸ್ತೃತ ಮನವಿ ಸಲ್ಲಿಸಿತು.

ಕುಂದಾಪುರ ತಾಲ್ಲೂಕಿನ ಆಲೂರು ಗ್ರಾಮದ ಸರ್ವೇ ನಂ.153 ರಲ್ಲಿರುವ ಸರಕಾರಿ ಡಿ.ಸಿ. ಮನ್ನಾ ಭೂಮಿಯನ್ನು ಭೂಹೀನ ಕೊರಗ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಂಜೂರಾತಿ ಮಾಡುವ ಪ್ರಕ್ರಿಯೆ ಕಳೆದ ಸುಮಾರು ಹತ್ತು ವರ್ಷಗಳಿಂದ ವಿಳಂಬವಾಗುತ್ತಿರುವುದಕ್ಕೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕರಾವಳಿ ಭಾಗದ ಅತ್ಯಂತ ಹಿಂದುಳಿದ ಆದಿವಾಸಿ ಸಮುದಾಯಗಳಲ್ಲಿ ಒಂದಾದ ಕೊರಗ ಸಮುದಾಯದ ಅನೇಕ ಕುಟುಂಬಗಳು ಇಂದಿಗೂ ಕೃಷಿ ಭೂಮಿಯಿಲ್ಲದೆ ಅತೀ ದುರ್ಬಲ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿವೆ. ಭಾರತ ಸರ್ಕಾರವು ಈ ಸಮುದಾಯವನ್ನು “Particularly Vulnerable Tribal Group (PVTG)” ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಇವರಿಗೆ ಭೂಮಿ ಮಂಜೂರಾತಿ ಪ್ರಕ್ರಿಯೆಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ.

ಆಲೂರು ಗ್ರಾಮದ ಸರ್ವೇ ನಂ.153 ರ ಒಟ್ಟು 7.65 ಎಕರೆ ವಿಸ್ತೀರ್ಣದಲ್ಲಿ ಸುಮಾರು 7.53 ಎಕರೆ ಸರಕಾರಿ ಡಿ.ಸಿ. ಮನ್ನಾ ಭೂಮಿಯಾಗಿದ್ದು, ಕೇವಲ 0.12 ಎಕರೆ ಮಾತ್ರ ಅರಣ್ಯ ಇಲಾಖೆಗೆ ಅಧಿಸೂಚಿತವಾಗಿದೆ ಎಂಬುದು ಕಂದಾಯ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ, ಸದರಿ ಭೂಮಿಯಲ್ಲಿ ಗೇರು ನೆಡುತೋಪು ಇರುವುದನ್ನು ಆಧಾರವನ್ನಾಗಿ ಮಾಡಿಕೊಂಡು ಕರ್ನಾಟಕ ಗೇರು ಅಭಿವೃದ್ಧಿ ನಿಗಮದಿಂದ ವ್ಯಕ್ತವಾಗಿರುವ ಆಕ್ಷೇಪಣೆಯಿಂದ ಮಂಜೂರಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸಮಿತಿ ಆರೋಪಿಸಿದೆ.

Click Here

ಮನವಿ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಸದರಿ ಭೂಮಿ ಮಂಜೂರಾತಿಗೆ ಸಂಬಂಧಿಸಿದ ಪ್ರಾಥಮಿಕ ಪರಿಶೀಲನೆ, ಜಂಟಿ ಸರ್ವೇ ಸೇರಿದಂತೆ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ಅಂತಿಮ ಮಂಜೂರಾತಿ ಹಂತದಲ್ಲಿ ಅನಗತ್ಯ ವಿಳಂಬವಾಗುತ್ತಿರುವುದರಿಂದ ಫಲಾನುಭವಿಗಳಾದ ಕೊರಗ ಸಮುದಾಯದ ಭೂಹೀನ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ ಎಂದು ತಿಳಿಸಲಾಗಿದೆ.

ಭೂಮಿಯ ಮೂಲ ಹಕ್ಕುಸ್ಥಿತಿ ಸರಕಾರಿ ಡಿ.ಸಿ. ಮನ್ನಾ ಭೂಮಿಯಾಗಿದ್ದು, ಸಂಬಂಧಿತ ದಾಖಲೆಗಳ ಪ್ರಕಾರ ಕೇವಲ ಅಲ್ಪ ಪ್ರಮಾಣದ ಭೂಮಿಯಷ್ಟೇ ಅರಣ್ಯ ಅಧಿಸೂಚನೆ ವ್ಯಾಪ್ತಿಗೆ ಒಳಪಟ್ಟಿದೆ ಎಂದು ನಿಯೋಗ ಮನವಿ ಪತ್ರದಲ್ಲಿ ವಿವರಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಅನೇಕ ಮನವಿಗಳು, ಧರಣಿ, ಸ್ಥಳ ಪರಿಶೀಲನೆ, ಜಂಟಿ ಸರ್ವೇ, ಮಹಜರು ಸೇರಿದಂತೆ ವಿವಿಧ ಆಡಳಿತಾತ್ಮಕ ಪ್ರಕ್ರಿಯೆಗಳು ನಡೆದಿದ್ದರೂ ಇನ್ನೂ ಅಂತಿಮ ಮಂಜೂರಾತಿ ಆಗದಿರುವುದು ಆಡಳಿತದ ನಿರ್ಲಕ್ಷ್ಯ ಹಾಗೂ ಸಾಮಾಜಿಕ ನ್ಯಾಯದ ವಿಳಂಬವನ್ನು ತೋರಿಸುತ್ತದೆ ಎಂದು ಸಮಿತಿ ತಿಳಿಸಿದೆ.

ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಬದ್ಧ ಹಕ್ಕಿನ ದೃಷ್ಟಿಯಿಂದ ಸದರಿ ಭೂಮಿಯನ್ನು ಗೇರು ನಿಗಮದ ಬಳಕೆಯಿಂದ ಬಿಡುಗಡೆಗೊಳಿಸಿ ಭೂಹೀನ ಕೊರಗ ಸಮುದಾಯದ 13 ಫಲಾನುಭವಿ ಕುಟುಂಬಗಳಿಗೆ ತಕ್ಷಣ ಮಂಜೂರಾತಿ ಮಾಡಿ ಹಕ್ಕುಪತ್ರ ವಿತರಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ನ್ಯಾಯಯುತ ಬೇಡಿಕೆಗಳನ್ನು ತುರ್ತಾಗಿ ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಫಲಾನುಭವಿಗಳ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಈ ನಿಯೋಗದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಅವರ ನೇತೃತ್ವದಲ್ಲಿ 13 ಕೊರಗ ಸಮುದಾಯದ ಫಲಾನುಭವಿ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಗಣೇಶ ಆಲೂರು, ಪಡುಬಿದ್ರಿ ಘಟಕ ಕಾರ್ಯದರ್ಶಿ ತುಳಸಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕರು ಸಂಜೀವ ಬಳ್ಕೂರು ಸೇರಿದಂತೆ ಮಾಲತಿ ಆಲೂರು, ಸುರೇಶ್ ಆಲೂರು, ಮಂಜುನಾಥ ಆಲೂರು, ರೇಷ್ಮಾ ನಾಡ, ಚಂದ್ರವತಿ, ಶೇಖರ, ಶಮಂತ್, ಬಾಬಿ ಆಲೂರು ಹಾಗೂ ಕಾರ್ಮಿಕ ಮುಖಂಡರಾದ ಸುರೇಶ್ ಕಲಾಗಾರ್ ಮತ್ತು ವಿ. ಚಂದ್ರಶೇಖರ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here