ಕುಂದಾಪುರ ಮಿರರ್ ಸುದ್ದಿ…

ಅಂಪಾರು: ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ) ಅಂಪಾರು ಆಶ್ರಯದಲ್ಲಿ ನಡೆಯುತ್ತಿರುವ ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಾ.27ರಂದು ಕಿಂಡರ್‌ಗಾರ್ಟನ್ ಮಕ್ಕಳ ಪದವಿ ಪ್ರದಾನ ಸಮಾರಂಭವು ವೈಭವಯುತವಾಗಿ ಭಾವನಾತ್ಮಕ ಕ್ಷಣಗಳು ಹಾಗೂ ಸಂಸ್ಕೃತಿಯ ಸೊಗಡಿನಿಂದ ಕಂಗೊಳಿಸಿತು.
ಕಾರ್ಯಕ್ರಮವನ್ನು ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿನಯ ದಿನೇಶ್ ಶೆಣೈ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ ಭಾಷಣದಲ್ಲಿ ಮಕ್ಕಳ ಮನಮೋಹಕ ಪ್ರತಿಭೆಯನ್ನು ಹೃದಯಪೂರ್ವಕವಾಗಿ ಶ್ಲಾಘಿಸಿ, “ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ತರ, ಪ್ರೀತಿಯ ಜೊತೆಗೆ ಸಕಾಲಿಕ ಮಾರ್ಗದರ್ಶನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅತ್ಯಗತ್ಯ ಎಂದು ನುಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಶಾಲೆಯ ಹಾಗೂ ಟ್ರಸ್ಟ್ ನ ದ್ಯೇಯೋದ್ಧೇಶ ವನ್ನು ಸಭೆಯಲ್ಲಿ ಹಂಚಿಕೊಂಡರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಶಾಲೆಯ ಶೈಕ್ಷಣಿಕ ಸಂಚಾಲಕರು ಹಾಗೂ ಟ್ರಸ್ಟ್‌ನ ಖಜಾಂಚಿಯೂ ಆದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಅವರು ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯವು ಜೀವನದ ಯಶಸ್ಸಿಗೆ ಆಧಾರವಾಗಿದ್ದು, ವಿದ್ಯಾರ್ಥಿಗಳು ಬಾಲ್ಯದಲ್ಲೇ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರೇರಣಾದಾಯಕವಾಗಿ ಹೇಳಿದರು.
ಶಾಲೆಯ ಆಡಳಿತಾಧಿಕಾರಿಯಾದ ಚೈತ್ರ ಯಡಿಯಾಳ ಅವರು ಸ್ವಾಗತ ಭಾಷಣದ ಮೂಲಕ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು, ಶಾಲೆಯ ಗುರಿಗಳು, ದೃಷ್ಟಿಕೋನ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಿರಿಯ ಮಕ್ಕಳಲ್ಲಿರುವ ಆತ್ಮವಿಶ್ವಾಸ ಮತ್ತು ಪ್ರತಿಭೆಯನ್ನು ಮೆಚ್ಚಿ, “ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಯುಕೆಜಿ ವಿದ್ಯಾರ್ಥಿಗಳಿಗೆ ಮೈಸೂರು ಪೇಟಾ ಹಾಗೂ ಶಾಲು ಹೊದಿಸಿ, ತಿಲಕ ಹಾಗೂ ಅಕ್ಷತೆ ಹಾಕಿ ಶುಭ ಹಾರೈಸಿ ಗೌರವಿಸಲಾಯಿತು. ಜೊತೆಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಿ ಅವರ ಸಾಧನೆಯನ್ನು ಸ್ಮರಣೀಯಗೊಳಿಸಲಾಯಿತು. ಎಲ್‌ಕೆಜಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸಿ, ಅವರನ್ನು ಸಹ ಹರ್ಷಭರಿತವಾಗಿ ಅಭಿನಂದಿಸಲಾಯಿತು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಪ್ರತಿಬಿಂಬಿಸುವಂತೆ ಈ ಸಮಾರಂಭವನ್ನು ವಿನೂತನವಾಗಿ ವಿನ್ಯಾಸಗೊಳಿಸಲಾಗಿತ್ತು. ವಿಶೇಷವೆಂದರೆ, ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಯನ್ನು ಕಿಂಡರ್‌ಗಾರ್ಟನ್ ಮಕ್ಕಳು ಸ್ವತಃ ನಿಭಾಯಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಿರೂಪಣೆ, ಪ್ರಾರ್ಥನೆ, ಸ್ವಾಗತ, ಅಮೃತ ವಚನ, ವಂದನಾರ್ಪಣೆ ಮೊದಲಾದ ಎಲ್ಲಾ ಸಭಾ ಕಾರ್ಯಕ್ರಮಗಳನ್ನು ಶಿಕ್ಷಕಿಯರಾದ ಶೋಭಾ ಹಾಗೂ ಶ್ವೇತಾ ಅವರ ಮಾರ್ಗದರ್ಶನದಲ್ಲಿ ಮಕ್ಕಳೇ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕಾರ್ಯಕ್ರಮದ ನಂತರ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಮನರಂಜನಾ ನೃತ್ಯ ಪ್ರದರ್ಶನಗಳು ನಡೆದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದವು.
ಒಟ್ಟಾರೆಯಾಗಿ, ಈ ಕಿಂಡರ್‌ಗಾರ್ಟನ್ ಪದವಿ ಪ್ರದಾನ ಸಮಾರಂಭವು ಮಕ್ಕಳ ಪ್ರತಿಭೆ, ಸಂಸ್ಕಾರ ಮತ್ತು ಶಾಲೆಯ ಶೈಕ್ಷಣಿಕ ಶ್ರೇಷ್ಠತೆಯನ್ನು ಅನಾವರಣಗೊಳಿಸಿದ ಸ್ಮರಣೀಯ, ಮನಮೋಹಕ ಕಾರ್ಯಕ್ರಮವಾಗಿ ಮೂಡಿ ಬಂತು.












