ಕುಂದಾಪುರ :ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ ಇನ್ನಿಲ್ಲ

0
161

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಪಾಧ್ಯಕ್ಷರಾಗಿದ್ದ ಸಂಗಾತಿ ವೆಂಕಟೇಶ ಕೋಣಿ (೭೪ವ) ಇಂದು (ಎ.೯) ನಿಧನರಾದರು. ಕಳೆದ ಎರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾದರು.
ಅವರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.

Click Here

ವಿದ್ಯಾರ್ಥಿ ದಶೆಯಲ್ಲಿಯೇ ಭೂಮಾಲೀಕರ ದೌರ್ಜನ್ಯಗಳ ವಿರುದ್ಧ ಹೋರಾಟದ ದಾರಿಯಲ್ಲಿ ನಿಂತಿದ್ದ ಅವರು, ಆ ಹೋರಾಟದ ಬೆಲೆಯಾಗಿ ಅಸಿಡ್ ದಾಳಿಗೂ ಒಳಗಾಗಿ ಬದುಕುಳಿದ ಅಪರೂಪದ ಹೋರಾಟಗಾರರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ವೆಂಕಟೇಶ ಕೋಣಿ ಅವರು ಕರಾವಳಿ ಭಾಗದ ಕೃಷಿಕೂಲಿಕಾರರ ದಿಟ್ಟ, ಗಟ್ಟಿ, ನಿರ್ಭಯ ಧ್ವನಿಯಾಗಿದ್ದರು.
ಕಮ್ಯುನಿಸ್ಟ್ ಚಳುವಳಿಗೆ ಜೀವನವನ್ನೇ ಸಮರ್ಪಿಸಿದ್ದ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದು, ಉಡುಪಿ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾಗಿಯೂ ಮಹತ್ವದ ಹೊಣೆ ಹೊತ್ತಿದ್ದರು.
ದಾಸ ಭಂಡಾರಿ, ದೋಗು ಸುವರ್ಣ ಹಾಗೂ ವೆಂಕಟೇಶ ಕೋಣಿ ಅವರ ನೇತೃತ್ವದಲ್ಲಿ ನಡೆದ ನಿವೇಶನ ರಹಿತರ ಹೋರಾಟ ಉಡುಪಿ ಜಿಲ್ಲೆಯಲ್ಲಿ ಹೊಸ ಚರಿತ್ರೆಯನ್ನೇ ನಿರ್ಮಿಸಿತ್ತು. ಪಂಚಾಯತ್ ಮಟ್ಟದಲ್ಲಿ ನಿವೇಶನ ರಹಿತರ ಪಟ್ಟಿಗಳನ್ನು ಸಿದ್ಧಪಡಿಸುವುದರಿಂದ ಹಿಡಿದು, ಹಲವು ಪಂಚಾಯತ್‌ಗಳಲ್ಲಿ ಅವರಿಗೆ ನಿವೇಶನ ದೊರಕಿಸುವ ಹಂತದವರೆಗೆ ಹೋರಾಟವನ್ನು ಕೊಂಡೊಯ್ದ ಅವರ ಪಾತ್ರ ಅಮೂಲ್ಯ.
ಅವರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಹಿರಿಯ ಕಮ್ಯುನಿಸ್ಟ್ ನಾಯಕರನ್ನು ಕಳೆದುಕೊಂಡಿದ್ದರೆ, ಕರಾವಳಿಯ ಕೃಷಿ ಕೂಲಿಕಾರರು ತಮ್ಮ ಹಕ್ಕಿಗಾಗಿ ಗಟ್ಟಿಯಾಗಿ ಮಾತಾಡುತ್ತಿದ್ದ ಅಪರೂಪದ ಧ್ವನಿಯೊಂದನ್ನು ಕಳೆದುಕೊಂಡಿದ್ದಾರೆ.
ಮರಣಾನಂತರವೂ ಸಮಾಜದ ಮೇಲಿನ ಬದ್ಧತೆಯನ್ನು ಉಳಿಸಿಕೊಂಡ ಅವರು, ತಮ್ಮ ಇಚ್ಛೆಯಂತೆ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದೇಹದಾನ ಮಾಡಿರುವುದು ಅವರ ಮಾನವೀಯತೆಯ, ವೈಚಾರಿಕತೆಯ ಹಾಗೂ ಸಮಾಜಮುಖಿ ಬದುಕಿನ ಉನ್ನತ ಸಾಕ್ಷಿಯಾಗಿದೆ.
ಹೋರಾಟದ ದಾರಿಯಲ್ಲಿ ಹೆಜ್ಜೆ ಹಾಕಿದ ವೆಂಕಟೇಶ ಕೋಣಿ ಅವರಿಗೆ ಸಿಪಿ‌ಎಂ ಜಿಲ್ಲಾ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

Click Here

LEAVE A REPLY

Please enter your comment!
Please enter your name here