ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿವರಿಗೆ ಹುಟ್ಟೂರ ಸನ್ಮಾನ

0
737

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬದುಕಿಗೆ ಅರ್ಥವನ್ನು ಹುಡುಕುತ್ತಾ ಹೋದಾಗ ಪರವೂರಿನಲ್ಲಿ ನೆಲೆಸಿ ಊರಿಗೂ ಉಪಕಾರಿಯಾಗಿ ಸಾರ್ಥಕತೆ ಪಡೆದ ವ್ಯಕ್ತಿಗೆ ಹುಟ್ಟೂರಿನಲ್ಲಿಯೇ ಅಭಿನಂದಿಸುವ ಈ‌ ಕಾರ್ಯಕ್ರಮ ಶ್ಲಾಘನೀಯ. ಉಸಿರಾಡುವಿಕೆಯೇ, ಸುಖಾನುಭವ ಬದುಕಲ್ಲ. ತನ್ನ ಸಾಮಾಜಿಕ, ಆದ್ಯಾತ್ಮಿಕತೆಯೇ ಬದುಕು. ಜೀವನದಲ್ಲಿ ಅತ್ಯಂತ ಎತ್ತರದಲ್ಲಿರುವುದು ಭಗವಂತ.‌ ತನ್ನ ಜೊತೆ ಇತರರು ಉತ್ತಮವಾಗಿರಬೇಕೆಂದು ಬಯಸುವುದು ಸಾರ್ಥಕತೆ. ಜೀವನದ ನೆಮ್ಮದಿಯ ತಾಣ ಹುಟ್ಟೂರು. ಜೀವನದ ಎಲ್ಲಾ ಸೌಲಭ್ಯ ಊರಿಗೂ ವಿಸ್ತರಿಸಿದ ಸಾಮಾಜಿಕ ಚಿಂತನೆಯುಳ್ಳವರು. ಅಸಾಧಾರಣ ಸಾಧನೆ ಮಾಡಿದವರಿಗೆ ಸನ್ಮಾನ ನೀಡಲೇಬೇಕಾಗಿರುವುದು ಅಗತ್ಯ. ಸಾವಿರಾರು ಮಂದಿ ಬದುಕನ್ನು ಏಳಿಗೆಯತ್ತ ಕೊಂಡೊಯ್ದ ಪ್ರವೀಣ ಶೆಟ್ಟಿಯವರ ಕೀರ್ತಿ ಜಗದುದ್ದಗಲಕ್ಕೂ ಹೊರಹೊಮ್ಮಿದೆ ಎಂದು ಶ್ರೀ ಸುಬ್ರಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ವತಿಯಿಂದ ವಕ್ವಾಡಿ ಫಾರ್ಚೂನ್ ವಿಲೇಜ್ ಹೊಟೇಲ್ ಬಳಿ ಅದ್ಧೂರಿ ವೇದಿಕೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಹುಟ್ಟೂರಿನ ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಪ್ರವೀಣ್ ಶೆಟ್ಟಿಯವರು ಪ್ರಸಾದ್ ನೇತ್ರಾಲಯಕ್ಕೆ‌ ಕೊಡುಗೆಯಾಗಿ ನೀಡಿದ ಅಂಬುಲೆನ್ಸ್ ವಾಹನದ ಕಿಲಿಕೈ ಹಸ್ತಾಂತರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಮಾತನಾಡಿ, ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರವಿಲ್ಲದೆ ಸಾಧನೆ ಮಾಡಿದವರನ್ನು ಗುರುತಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಆಯ್ಕೆ ಸಮಿತಿಗೆ ಓರ್ವ ಸಚಿವನಾಗಿ ಸೂಚಿಸಿದ್ದೆ.‌ ಅಂತೆಯೇ ಕೊರೋನಾ ಸಂದರ್ಭದಲ್ಲಿ ವಿದೇಶ ಹಾಗೂ ತನ್ನ ಊರಿನಲ್ಲಿ ಮಾಡಿದ ಸೇವಾ ಕಾರ್ಯ, ದುಬೈನಲ್ಲಿ‌ ಅವರಿಗೆ ನಡೆದ ಸನ್ಮಾನಗಳನ್ನು ಗುರುತಿಸಿ‌‌ ಪ್ರವೀಣ್ ಕುಮಾರ್ ಶೆಟ್ಟಿಯವರು ಅರ್ಜಿ ಹಾಕದಿದ್ದರೂ‌ ಕೂಡ ಆಯ್ಕೆ ಸಮಿತಿ ಹೊರನಾಡುಕನ್ನಡ ವಿಭಾಗದಲ್ಲಿ ಆಯ್ಕೆ ಮಾಡಿದ್ದು ಅವರಿಗೆ ಸಿಕ್ಕ ಪ್ರಶಸ್ತಿ ಕರ್ನಾಟಕ ರಾಜ್ಯಕ್ಕೆ ಹಾಗೂ ಇಲಾಖೆಗೆ ಸಿಕ್ಕ ಪ್ರಶಸ್ತಿ ಎಂದು ವ್ಯಾಖ್ಯಾನಿಸಿದ ಸಚಿವರು ಪ್ರವೀಣ್ ಶೆಟ್ಟಿಯವರು ದುಬೈನಲ್ಲಿ ದೊಡ್ಡದಾಗಿ ಉದ್ಯಮಿ ಸ್ಥಾಪಿಸಿ ಆ ಲಾಭದಲ್ಲಿ ಬಹುಪಾಲು ಹಣ ಊರಿಗೆ ನೀಡುತ್ತಿದ್ದು ಇಂತಹ ಸಾಧಕರು ಇನ್ನಷ್ಟು ಹೆಚ್ಚಲಿ. ಈ ಸನ್ಮಾನದ ಮೂಲಕ ಇತರರಿಗೆ ಸಾಧನೆಯ ಪ್ರೇರಣೆ ಸಿಗಲಿ ಎಂದರು.

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ದುಬೈನಲ್ಲಿಯೂ‌ ಕೂಡ‌ ಕನ್ನಡ ಶಾಲೆಯ ಉಳಿವಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರವೀಣ್ ಶೆಟ್ಟಿಯವರು ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಡಿದ ಸಮಾಜಸೇವೆ ಅನುಕರಣೀಯ. ನನ್ನ ಶಾಲೆ‌‌ ನನ್ನ‌ ಕೊಡುಗೆ ಎಂಬ ಇಲಾಖೆಯ ಕಾರ್ಯಕ್ರಮದಡಿ ವಕ್ವಾಡಿಯ ಶಾಲೆ ದತ್ತು‌ ಪಡೆಯವ ಒಡಂಬಡಿಕೆಯನ್ನು ಪ್ರವೀಣ್ ಕುಮಾರ್ ಶೆಟ್ಟಿ ಮಾಡಿದ್ದಾರೆ ಎಂದು ಸಚಿವರು ಘೋಷಿಸಿದರು.

Click Here

ಇದೇ ಸಂದರ್ಭದಲ್ಲಿ 17 ಮಂದಿ ಅಶಕ್ತರಿಗೆ ವೈದ್ಯಕೀಯ ನೆರವಿನ‌ ಸಹಾಯಧನ ವಿತರಿಸಲಾಯಿತು. ವಕ್ವಾಡಿ ಶಾಲೆಯ 25 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ‌ ಬಳಿಕ ಪುನೀತ್ ಇಲ್ಲದ ನೋವು ಕಾಡಿತ್ತು. ಎಲ್ಲಡೆ‌ ಸನ್ಮಾನಗಳನ್ನು ಪಡೆದರೂ ಕೂಡ ಹುಟ್ಟೂರಿನಲ್ಲಿ‌ ನಡೆದ ಸನ್ಮಾನ ಕೊನೆ ಉಸಿರು ಇರುವ ತನಕ ಮರೆಯೋದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯ ಸಂಪಾದಕ ವಿಶ್ವೇಶ್ವರ ಭಟ್, ಉದ್ಯಮಿ ಕೆ. ನಾಗರಾಜ್, ಯುಎಇ ಕನ್ನಡಿಗಾಸ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಶ್ರೀನಿವಾಸ್, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉಡುಪಿ‌ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್, ಹುಟ್ಟೂರ ಸನ್ಮಾನ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್, ವಕ್ವಾಡಿ ಪ್ರವೀಣ್ ಶೆಟ್ಟಿಯವರ ಧರ್ಮಪತ್ನಿ ರೂಪಾಲಿ ಪ್ರವೀಣ್ ಕುಮಾರ್ ಶೆಟ್ಟಿ, ಜಿ.ಪಿ. ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಟ-ನಿರ್ದೇಶಕ ರಿಷಬ್ ಶೆಟ್ಟಿ, ನಟಿ ಹರಿಪ್ರಿಯಾ ಮೊದಲಾದವರಿದ್ದರು.

ಮಂಗಳೂರು ಶ್ರೀ ರಾಮಕೃಷ್ಣ ಡಿಗ್ರಿ ಕಾಲೇಜು ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಹೆಗ್ಡೆ ಸ್ವಾಗತಿಸಿದರು. ದಿನಕರ್ ಆರ್. ಶೆಟ್ಟಿ ಪ್ರಸ್ತಾವಿಸಿದರು. ಪತ್ರಕರ್ತ ಕೆ.ಸಿ ರಾಜೇಶ್, ಮಹೇಶ್ ವಕ್ವಾಡಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here