ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸಂವಿಧಾನದಲ್ಲಿ ಹೇಳಲಾಗಿರುವ ಹಕ್ಕು ಮತ್ತು ಕರ್ತವ್ಯಗಳಲ್ಲಿ ಅತ್ಯಂತ ಪ್ರಮಖವಾಗಿರುವ ಅಂಶ ರಾಷ್ಟ್ರಧ್ವಜದ ಕುರಿತಾಗಿದೆ. ನಮ್ಮ ಸ್ವಾಭಿಮಾನ ಹಾಗೂ ಅಭಿಮಾನದ ಪ್ರತೀಕವಾಗಿರುವ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯ ಅಗೌರವವಾಗದಂತೆ ಅದರ ಪಾವಿತ್ರ್ಯವನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರು ಕಟಿಬದ್ಧರಾಗಬೇಕು ಎಂದು ಬೈಂದೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಎನ್ ಹೇಳಿದರು.
ಮರವಂತೆ ಗ್ರಾಮ ಪಂಚಾಯಿತಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸೋಮವಾರ ಬೈಂದೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಭಾರತ್ ಸೇವಾದಳ ಸಮಿತಿ ಉಡುಪಿ, ಬೈಂದೂರು ತಾಲ್ಲೂಕು ಸೇವಾದಳ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ರಾಷ್ಟ್ರಧ್ವಜ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಭಾರತ್ ಸೇವಾದಳದ ಉಪಾಧ್ಯಕ್ಷ ರಾಜೇಶ್ ಕೆ.ಸಿ, ಪ್ರಜಾತಂತ್ರ ದೇಶದ ಕೀರ್ತಿ ಕಲಶದಂತೆ ರಾರಾಜಿಸುತ್ತಿರುವ ನಮ್ಮ ರಾಷ್ಟ್ರಧ್ವಜ ಪ್ರತಿಯೊಬ್ಬ ಭಾರತೀಯನ ಅಭಿಮಾನವಾಗಿದೆ. ಸ್ವತಂತ್ರ ಭಾರತದ ಸಾರ್ವಭೌಮತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಿರುವ ಭಾರತ ದೇಶದ ರಾಷ್ಟ್ರಧ್ವಜದ ಕುರಿತಾದ ಸಮಗ್ರ ಮಾಹಿತಿಗಳನ್ನು ಭಾರತ್ ಸೇವಾದಳ ತಿಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾಗತೀಕ ಮಟ್ಟದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ನಮ್ಮ ರಾಷ್ಟ್ರಧ್ವಜಗಳಿಗೆ ಇರುವ ಮಹತ್ವಗಳು ಸಾಮಾನ್ಯ ದೇಶವಾಸಿಗಳಿಗೂ ತಿಳಿಯುವಂತಾಗಿದೆ ಎಂದರು.
ರಾಷ್ಟ್ರೀಯ ಹಬ್ಬಗಳು ಹಾಗೂ ಇತರ ಸಾಂದರ್ಭಿಕ ಸಂದರ್ಭಗಳಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಉಂಟಾಗುವ ಸಣ್ಣ ಲೋಪಗಳಿಂದಾಗಿ ಸಾಮಾಜಿಕವಾಗಿ ಅಗೌರವಗಳಾಗುತ್ತದೆ ಹಾಗೂ ಈ ತಪ್ಪುಗಳಿಗಾಗಿ ಶಿಕ್ಷೆಯನ್ನು ಅನುಭವಿಸುವ ಪ್ರಸಂಗಗಳು ಬರಬಹುದು. ಈ ಘಟನೆಗಳು ನಮ್ಮ ಜಿಲ್ಲೆಯಲ್ಲಿ ಆಗಬಾರದು ಎನ್ನುವ ಸದುದ್ದೇಶದಿಂದ ಜಿಲ್ಲಾಡಳಿತದ ಸಹಯೋಗದೊಂದಿಗೆ ಭಾರತ್ ಸೇವಾದಳ ಮೂಲಕ ಜಿಲ್ಲಾದ್ಯಂತ ರಾಷ್ಟ್ರಧ್ವಜ ಮಾಹಿತಿ ಕಾರ್ಯಗಾರ ಸಂಘಟಿಸುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ಜಿಲ್ಲಾ ಭಾರತ್ ಸೇವಾದಳ ಪ್ರಧಾನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಹಶೀಲ್ದಾರ್ ಶೋಭಾಲಕ್ಷ್ಮೀ ಅವರು ಭಾರತದ ರಾಷ್ಟ್ರಧ್ವಜಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ರಾಜ-ಮಹಾರಾಜರ ಕಾಲದಿಂದಲೂ ರಾಷ್ಟ್ರಧ್ವಜದ ಪಾಲನೆಯ ಪರಿಪಾಠಗಳು ನಮ್ಮ ದೇಶದಲ್ಲಿ ಇತ್ತು. ಸ್ವಾತಂತ್ರ್ಯ ಪೂರ್ವದಿಂದ ನಡೆದ ಹೋರಾಟಗಳಲ್ಲಿಯೂ ರಾಷ್ಟ್ರಧ್ವಜದ ಬಳಕೆಗಳು ಆಗುತ್ತಿದ್ದವು. ಸ್ವತಂತ್ರ ಭಾರತದ ರಾಷ್ಟಧ್ವಜವಾದ ತ್ರಿವರ್ಣ ಧ್ವಜ ನಮ್ಮ ಗೌರವ, ಶಾಂತಿ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ದೇಶದ ಮೇಲಿನ ಅಭಿಮಾನ, ರಾಷ್ಟ್ರಪರವಾದ ಚಿಂತನೆ ಹಾಗೂ ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ರಾಷ್ಟ್ರಧ್ವಜ ನಮ್ಮ ಹೆಮ್ಮೆ ಎಂದು ಹೇಳಿದರು.
ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಬೈಂದೂರು ತಾಲ್ಲೂಕು ಭಾರತ್ ಸೇವಾದಳ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಉಬ್ಜೇರಿ ಇದ್ದರು.
ಉಡುಪಿ ಜಿಲ್ಲಾ ಭಾರತ್ ಸೇವಾದಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರಧ್ವಜದ ಕುರಿತಂತೆ ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆ ಮೂಲಕ ರಾಷ್ಟ್ರಧ್ವಜ ಆರೋಹಣ ಹಾಗೂ ಅವರೋಹಣ ವಿಧಾನ ತಿಳಿಸಲಾಯಿತು. ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಬೈಂದೂರು ತಾಲ್ಲೂಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪ್ರಭಾಕರ ಸ್ವಾಗತಿಸಿದರು, ಭಾರತ್ ಸೇವಾದಳ ಜಿಲ್ಲಾ ಸಮಿತಿ ಸಂಘಟಕ ಪಕ್ಕೀರಪ್ಪ ಗೌಡ ನಿರೂಪಿಸಿದರು.
ವಂದೇ ಮಾತರಂ ಹಾಡಿದ ತಹಶೀಲ್ದಾರ್
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳನ್ನು ಆಡಲೆಂದು ಧ್ವನಿ ವರ್ಧಕದ ಬಳಿ ಬಂದ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಅವರು ವಂದೇ ಮಾತರಂ ಗೀತೆಯನ್ನು ಹಾಡಲು ಪ್ರಾರಂಭಿಸುತ್ತದ್ದಂತೆ ಸಭಾಂಗಣದಲ್ಲಿ ಸೇರಿದ್ದ ಅತಿಥಿಗಳು ಹಾಗೂ ಸಭಿಕರು ಎದ್ದು ನಿಂತು ವಂದೇ ಮಾತರಂ ಗೀತೆಗೆ ಧ್ವನಿಯಾಗುವ ಮೂಲಕ ಗೌರವ ಸಲ್ಲಿಸಿದರು.











