ಕುಂದಾಪುರ ಮಿರರ್ ಸುದ್ದಿ…
ಕೋಟ: ಮನುಜನಾಗಿ ಹುಟ್ಟಿದಮೇಲೆ ನಾವು ಸಂಪಾದಿಸುವುದರಲ್ಲಿ ಒಂದಿಷ್ಟು ಅಂಶವನ್ನು ಇತರರಿಗೆ ದಾನ ಮಾಡಬೇಕು. ಅದು ಅವಶ್ಯಕತೆ ಇರುವವರಿಗೆ ಸಿಕ್ಕಿದಾಗ ಜೀವನ ಸಾರ್ಥಕ್ಯವನ್ನು ಪಡೆದ ತೃಪ್ತಿ ಸಿಗುತ್ತದೆ ಎಂದು ಶಶಿಧರ ಪುರೋಹಿತ ಕಟಪಾಡಿ ಅಭಿಪ್ರಾಯಪಟ್ಟರು.
ಅವರು ವಡ್ಡರ್ಸೆ ಯಲ್ಲಿ ದಿವಂಗತ ನಾರಾಯಣ ಆಚಾರ್ಯರ ಪತ್ನಿ ಸರಸ್ವತಿ ಆಚಾರ್ಯರಿಗೆ ಮನೆಯನ್ನು ನಿರ್ಮಿಸಿಕೊಟ್ಟು ಅದನ್ನು ಇಂದು ಹಸ್ತಾಂತರ ಮಾಡಿ ಮಾತನಾಡುತ್ತಾ ಸಮಾನ ಮನಸ್ಕರ ತಂಡವೆಂಬ ಹೆಸರಿನ ಸದಸ್ಯರೊಂದಿಗೆ ಇದು ಸಾಧ್ಯವಾಯಿತು. ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಅವರಿಗೆ ಒಂದು ಸೂರಿನ ಅವಶ್ಯಕತೆ ಇರುತ್ತದೆ ಅದನ್ನು ಎಲ್ಲರ ಸಹಾಯದೊಂದಿಗೆ ನಿರ್ಮಿಸಿ ಕೊಟ್ಟಾಗ ಸಿಗುವ ಆನಂದ ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಡ್ಡರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತಾ ಪ್ರಕಾಶ್ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ರೋಹಿತಾಕ್ಷ ಪುರೋಹಿತ ಕುಂಭಾಶಿ, ಸಕ್ಕಡ್ ಟ್ರಸ್ಟ್ ಕೋಟ ಇದರ ಟ್ರಸ್ಟಿ ಶ್ರೀಕಾಂತ್ ಶೆಣೈ ಕೋಟ, ರಾಘವೇಂದ್ರ ಆಚಾರ್ಯ ಕೋಟ, ವಜ್ರೇಶ್ವರಿ ಬ್ರಹ್ಮಾವರ, ಶಾಂತ ಆಚಾರ್ಯ, ವಾಸುದೇವ ಆಚಾರ್ಯ ಶಿರಿಯಾರ, ಯಜ್ಞ ನಾಥ ಆಚಾರ್ಯ ಬಾಳ್ಕಟ್ಟು, ಉಪೇಂದ್ರ ಆಚಾರ್ಯ ಪೆರ್ಡೂರ್, ತಂಡದ ಸದಸ್ಯರುಗಳು, ಫಲಾನುಭವಿ ಮನೆಯವರು ಉಪಸ್ಥಿತರಿದ್ದರು.
ರೋಹಿತಾಕ್ಷ ಪುರೋಹಿತ್ ಪ್ರಾರ್ಥಿಸಿದರು, ಮಾಧವ ಆಚಾರ್ಯ ಸ್ವಾಗತಿಸಿದರು, ಪ್ರಕಾಶ್ ಆಚಾರ್ಯ ಕುಕ್ಕೆಹಳ್ಳಿ ವಂದಿಸಿದರು, ಶಿಕ್ಷಕ ವಡ್ಡರ್ಸೆ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.











