ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಸ್ವಾರ್ಥ ಬಿಟ್ಟು ಯೋಚನೆ ಮಾಡಬೇಕು. ತ್ಯಾಗ, ಸೇವೆಗೆ ಮಹತ್ವವಿದೆ. ಸಮರ್ಪಣೆ, ನಿಸ್ವಾರ್ಥವಾದ ಸೇವಾಮನೋಭಾವನ್ನು ಜಗತ್ತು ಗುರುತಿಸುತ್ತದೆ. ಇವತ್ತು ಸಾಕಷ್ಟು ಆಕ್ರಮಣಗಳಿಗೆ ಸಿಲುಕಿ ಶೇ.80ರಷ್ಟು ಹಿಂದೂ ಸಮಾಜ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಸರ್ವಧರ್ಮ ಸಮನ್ವಯತೆಯ ಮೌಲ್ಯಗಳು. ನಮ್ಮ ಜೀವನದ ಕೇಂದ್ರ ವ್ಯವಸ್ಥೆ ದೇವಸ್ಥಾನ, ಧಾರ್ಮಿಕ ಸ್ಥಳಗಳು, ಎಲ್ಲಕ್ಕಿಂತ ಮುಖ್ಯವಾಗಿ ತಾಯಿ ಪ್ರಧಾನ ಸ್ಥಾನ ಪಡೆಯುತ್ತಾಳೆ ಎಂದು ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.


ಶ್ರೀವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ, ಶೈಕ್ಷಣಿಕ ಸಾಮಾಜಿಕ, ಸೇವಾ ಸಂಸ್ಥೆ ಇದರ ಶ್ರೀ ವರಲಕ್ಷ್ಮಿ ನಿಲಯದ 7ನೇಮನೆಯಾಗಿ ಂದೂರಿನ ಗದ್ದೆಮನೆ ಲಕ್ಷ್ಮಿ ದೇವಾಡಿಗ ಇವರ ಮನೆಯ ಪ್ರವೇಶೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಉಳ್ಳವರು ಅನೇಕ ಜನರಿದ್ದಾರೆ. ಉಳ್ಳವರೆಲ್ಲರಿಗೂ ಕೊಡುವ ಗುಣಗಳಿರುವುದಿಲ್ಲ. ಹೃದಯದಲ್ಲಿ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವನೆ ಇದ್ದವರು ಮಾತ್ರ ದಾನ ಮಾಡುತ್ತಾರೆ. ವರಲಕ್ಷ್ಮಿ ಟ್ರಸ್ಟ್ ಮೂಲಕ ಗೋವಿಂದ ಬಾಬು ಪೂಜಾರಿಯವರ ಸೇವಾ ಕಾರ್ಯ ಶ್ಲಾಘನೀಯ. ಜೀವನದಲ್ಲಿ ಅಸಕ್ತರಿಗೆ ನೀಡುವ ನೆರವು ಬದುಕಿನಲ್ಲಿ ಸಾಕ್ಷಾತ್ಕಾರ ಮತ್ತು ಶ್ರೇಯಸ್ಸು ನೀಡುತ್ತದೆ ಎಂದರು.
ಇವತ್ತು ಜಗತ್ತಿನ ಹಿತಕ್ಕಾಗಿಯಾದರೂ ಹಿಂದೂ ಸಮಾಜದ ಇರಬೇಕು. ಮತಾಂತರ, ಲವ್ ಜಿಹಾದ್, ಭಯೋತ್ಪಾದನೆಯಿಂದ ನಿರಂತರವಾಗಿ ಹಿಂದೂ ಸಮಾಜದ ಮೇಲೆ ಹಾನಿಯಾಗುತ್ತಲೇ ಇದೆ. ಇದನ್ನು ಸಮರ್ಥವಾಗಿ ಎದುರಿಸಲು ಹಿಂದೂ ಸಮಾಜ ಜಾಗೃತವಾಗಬೇಕು ಎಂದರು.
ಇವತ್ತು ಹಿಜಾಬ್ ವಿಷಯವನ್ನು ಅನಗತ್ಯವಾಗಿ ಹಠದಿಂದ ದೊಡ್ಡ ವಿವಾದ ಸೃಷ್ಟಿಸಿದರು. ಅವರಿಗೆ ಸಂವಿಧಾನಕ್ಕಿಂತ ಧರ್ಮದ ನಿಲುವುಗಳೆ ಹೆಚ್ಚಾದವು. ಹೈಕೋರ್ಟ್ ಆದೇಶ ವಿರೋಧಿಸಿ ಬಂದ್ ಮಾಡಿದರು. ಇದನ್ನು ಗಮನಿಸುವಾಗ ಮುಸ್ಲಿಂರ ಮನಸ್ಥಿತಿ ಒಂದೇ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
ಶ್ರೀವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ವರಲಕ್ಷ್ಮಿ ಟ್ರಸ್ಟ್ ಮೂಲಕ ಬೈಂದೂರು ಭಾಗದಲ್ಲಿ 7 ಮನೆಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಕೋವಿಡ ಸಮಯದಲ್ಲಿ ಸಹಕಾರ ಸೇರಿದಂತೆ ಕುಡಿಯುವ ನೀರು ಸರಬರಾಜು ಮುಂತಾದ ಕಾರ್ಯಗಳ ಜೊತೆಗೆ ನೊಂದವರ ಸಂಕಷ್ಟಕ್ಕೆ ಧ್ವನಿಯಾಗುವ ಪ್ರಯತ್ನ ಮಾಡುತ್ತಿದ್ದೇನೆ. ಶಿಕ್ಷಣ ಸಂಸ್ಥೆ, ಗೋಶಾಲೆ ಮತ್ತು ಉದ್ಯೋಗ ಕಲ್ಪಿಸುವ ಸೇವೆಗಳನ್ನು ಆರಂಭಿಸುವ ಚಿಂತನೆಯಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಮಾನಾಥ ಜೋಯಿಷಿ ಉಡುಪಿ, ನಿವೃತ್ತ ಉಪನ್ಯಾಸಕರು ಹಾಗೂ ಪತ್ರಕರ್ತ ಎಸ್.ಜನಾರ್ದನ ಮರವಂತೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಮನೆಯ ಯಜಮಾನಿ ಲಕ್ಷ್ಮಿ ದೇವಾಡಿಗ ರವರಿಗೆ ಮನೆಯ ಕೀ ಯನ್ನು ಹಸ್ತಾಂತರಿಸಲಾಯಿತು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.











