ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚೆಗೆ ಗೋಳಿಗರಡಿ ಮೇಳದ ವೇದಿಕೆಯಲ್ಲಿ ರಾಜು ದೇವಾಡಿಗ ಕುದ್ರುಗೋಡು ಇವರಿಗೆ ಅವರ 25ನೇ ವರ್ಷದ ಯಕ್ಷಗಾನ ತಿರುಗಾಟ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಗೋಳಿಗರಡಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಾಸ್ತಾನದ ವತಿಯಿಂದ, ಮೇಳದ ಸರ್ವಕಲಾವಿದರು ಸೇರಿಕೊಂಡು ರಾಜು ದೇವಾಡಿಗ ದಂಪತಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಮೇಳದ ಯಜಮಾನರಾದ ವಿಠ್ಠಲ ಪೂಜಾರಿ, ಪ್ರಬಂಧಕರಾದ ಹರೀಶ್ ಸಾಲಿಯಾನ್, ಅರ್ಚಕರಾದ ಶ್ರೀನಿವಾಸ ಅಡಿಗ, ಮೇಳದ ಹಿತೈಷಿಗಳಾದ ಶಂಕರ ಕುಲಾಲರು, ಪಾತ್ರಿಗಳಾದ ಶಂಕರ ಪೂಜಾರಿ, ಪ್ರಧಾನ ಭಾಗವತರಾದ ಸುರೇಶ್ ರಾವ್ ಬಾರ್ಕೂರು, ಎರಡನೇ ವೇಷಧಾರಿ ಮಾಗೋಡು ರಾಘವೇಂದ್ರ, ಮುಖ್ಯ ಸ್ತ್ರೀ ಪಾತ್ರಧಾರಿ ಉಮೇಶ್ ಪೇತ್ರಿ, ಪ್ರಧಾನ ಹಾಸ್ಯಗಾರರಾದ ರಾಜೇಶ್ ಎಡಮೊಗೆ, ಹೀಗೆ ಸರ್ವ ಕಲಾವಿದರು ಉಪಸ್ಥಿತರಿದ್ದು ರಾಜು ಅವರಿಗೆ ಸ್ವರ್ಣ ಉಂಗುರದೊಂದಿಗೆ ಸನ್ಮಾನಿಸಿ ಉಜ್ವಲ ಭವಿಷ್ಯದೊಂದಿಗೆ ಗೌರವಿಸಿದರು. ಶಂಕರ ಕುಲಾಲರು ಮಾತನಾಡಿ ನಮ್ಮ ಮೇಳದಲ್ಲಿ ನಿಷ್ಟಾವಂತನಾಗಿ, ಎಲ್ಲರೊಂದಿಗೂ ಸ್ನೇಹ ಭಾವನೆಯಿಂದ ನಗುಮುಖದಿಂದ ಎಲ್ಲರೊಂದಿಗೂ ಕಲೆತು-ಬೆರೆತು ತನಗೆ ನೀಡಿದ ಪಾತ್ರಕ್ಕೆ ಜೀವತುಂಬುವಂತೆ ಮಾಡಿ ಅಪಾರ ಕಲಾಭಿಮಾನಿಗಳ, ಕಲಾವಿದರ ಮೆಚ್ಚುಗೆಗೆ ಪಾತ್ರರಾದವರು ರಾಜುದೇವಾಡಿಗರು, ಇವರ ಮುಂದಿನ ಯಕ್ಷಪಯಣ ಸುಲಲಿತವಾಗಲಿ, ಮತ್ತಷ್ಟು ಕಲಾಸೇವೆ ಮಾಡುವಂತಾ ಯೋಗ ಭಾಗ್ಯ ದೊರಕಲಿ ಎಂದು ಹಾರೈಸಿದರು. ಯಕ್ಷಗುರುಗಳಾದ ನವೀನ ಕೋಟ ಇವರು ಕಾರ್ಯಕ್ರಮ ನಿರೂಪಿಸಿದರು, ಮಹೇಶ್ ಬಿದ್ಕಲ್‍ಕಟ್ಟೆ ಸ್ವಾಗತಿಸಿ, ಕೃಷ್ಣ ಸಂತೆಕಟ್ಟೆ ವಂದಿಸಿದರು.











