ಕುಂದಾಪುರ ಮಿರರ್ ಸುದ್ದಿ…
ಕೋಟ: ಯಕ್ಷಗಾನ ದೇಶದ ಶ್ರೀಮಂತ ಕಲೆ. ಇದನ್ನು ಸಮಗಟ್ಟುವ ಕಲೆ ಮತ್ತೊಂದಿಲ್ಲ. ಹಿರಿಯರು ಕೊಟ್ಟು ಹೋದ ಅಮೂಲ್ಯ ಬಳುವಳಿಯನ್ನು ಉಳಿಸುವ ಬೆಳೆಸುವ ಪ್ರಯತ್ನ ನಮ್ಮದಾಗಬೇಕು. ಸತತ ಅಧ್ಯಯನಶೀಲ ಗುಣ ಕಲಾವಿದನನ್ನು ಬೆಳೆಸುತ್ತವೆ. ಒಳ್ಳೆಯ ಪ್ರದರ್ಶನವನ್ನು ಪೇಕ್ಷಕನಿಗೆ ತಲುಪಿಸುವಲ್ಲಿ ನಮ್ಮೆಲ್ಲಾ ಪ್ರತಿಯೊಬ್ಬ ಕಲಾವಿದನಿಗೂ ಪ್ರಾಮಾಣಿಕವಾಗಿ ಕಸುಬು ಮಾಡುವ ಹೊಣೆಗಾರಿಕೆಯಿದೆ. ನಿರ್ದೇಶನಕ್ಕೊಳಪಟ್ಟ ಮಕ್ಕಳ ಮೇಳಗಳು, ಹವ್ಯಾಸಿ ತಂಡಗಳು ಯಕ್ಷಗಾನದ ಉಳಿವಿನ ಆಶಾಕಿರಣ. ಆ ನಿಟ್ಟಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಪ್ರದರ್ಶನ ಅಭಿನಂದನೀಯ” ಎಂದು ಸಾಲಿಗ್ರಾಮ ಪಾರಂಪಳ್ಳಿಯ ನಾದಾಮೃತದ ನಿರ್ದೇಶಕ ,ಮದ್ದಳೆವಾದಕ ರಾಘವೇಂದ್ರ ಹೆಗಡೆ ಯಲ್ಲಾಪುರ ಹೇಳಿದರು.
ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಹರ ಚೌತಿಯ ಪ್ರಯುಕ್ತ ದೇವಳದ ಸಹಯೋಗದೊಂದಿಗೆ ಸಾಲಿಗ್ರಾಮ ಮಕ್ಕಳ ಮೇಳವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಿದ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.
ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆ ಅಧ್ಯಕ್ಷತೆವಹಿಸಿದ್ದರು. ಆನೆಗುಡ್ಡೆ ದೇವಸ್ಥಾನದ ಹಿರಿಯ ಧರ್ಮದರ್ಶಿಗಳಾದ ಸೂರ್ಯನಾರಾಯಣ ಉಪಾಧ್ಯ, ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾಧ್ಯ, ಯಕ್ಷದೇಗುಲ ಬೆಂಗಳೂರಿನ ಸುದರ್ಶನ ಉರಾಳ, ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ನಟೇಶ ಕಾರಂತ, ವಿಶ್ವನಾಥ ಐತಾಳ ಉಪಸ್ಥಿತರಿದ್ದರು.
ಮಕ್ಕಳ ಮೇಳದ ಪ್ರಾಕ್ತ್ತನ ಕಲಾವಿದ ಮನೋಜ್ ಸ್ವಾಗತಿಸಿ, ಸುಹಾಸ್ ವಂದಿಸಿದರು. ಮಕ್ಕಳ ಮೇಳದ ಕಾರ್ಯದರ್ಶಿ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಬಳಿಕ ಸುಜಯೀಂದ್ರ ಹಂದೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಮನೋಜ್ ಆಚಾರ್, ಸುದೀಪ ಉರಾಳ, ಸ್ಕಂದ, ಸಮೀಕ್ಷಿತ್ ಆಚಾರ್, ಕಾವ್ಯ ಹಂದೆ, ಚಿನ್ಮಯಿ, ಆರ್ಯನ್, ಅಶ್ವಿನ್ ಶೆಟ್ಟಿ ಮೊದಲಾದ ಕಲಾವಿದರಿಂದ ಕಾರ್ಕಡ ಶ್ರೀನಿವಾಸ ಉಡುಪ ವಿರಚಿತ ಪ್ರಸಂಗ ‘ವೀರ ವೃಷಸೇನ’ ಪ್ರದರ್ಶನ ಗೊಂಡಿತು.











