ವಿಶೇಷ ನಿಯಂತ್ರಣ ಅಭಿಯಾನ ನಡೆಸಿ, ಡೆಂಗ್ಯೂ ನಿಯಂತ್ರಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

0
764

Click Here

Click Here

ಕುಂದಾಪುರ ಮಿರರ್ ಸುದ್ದಿ…

 ಕುಂದಾಪುರ : ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ಗ್ರಾಮಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆ ಸೇರಿದಂತೆ ಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ಮೂರು ದಿನಗಳ ವಿಶೇಷ ಡೆಂಗ್ಯೂ ನಿಯಂತ್ರಣ ಅಭಿಯಾನ ನಡೆಸಿ, ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ಗ್ರಾಮಗಳ ಡೆಂಗ್ಯೂ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನಿಯಂತ್ರಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿ, ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ, ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುದೂರು ಹಾಗೂ ಜಡ್ಕಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು, ಪ್ರತಿ ಮನೆ ಮನೆಗೆ ಭೇಟಿ ನೀಡಿ, ಜ್ವರದ ಪರೀಕ್ಷೆಗಳನ್ನು ಮಾಡಿ, ಶಂಕಿತರು ಕಂಡು ಬಂದಲ್ಲಿ ಡೆಂಗ್ಯೂ ಪರೀಕ್ಷೆ ನಡೆಸಿ, ಡೆಂಗ್ಯೂ ಕಂಡುಬಂದಲ್ಲಿ ಪತ್ತೆಯಾದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಚಿಕಿತ್ಸೆ ನೀಡಲು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ಡೆಂಗ್ಯೂ ವಾರ್ಡನ್ನು ತೆರೆಯಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳೆಯ ನೀರು ಅಥವಾ ಇತರೆ ನೀರುಗಳು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದ ಅವರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಆಗಿಂದಾಗ್ಗೆ ಭೇಟಿ ನೀಡಿ, ಮನೆಯ ಸುತ್ತಮುತ್ತ ನೀರು ನಿಂತಿರುವ ಬಗ್ಗೆ ಪರೀಕ್ಷಿಸಿ, ಒಂದೊಮ್ಮೆ ನಿಂತಲ್ಲಿ ಅದನ್ನು ನಿಲ್ಲದಂತೆ ಮಾಡಿ, ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸದಂತೆ ಕ್ರಮ ವಹಿಸಬೇಕು ಎಂದರು.

ಡೆಂಗ್ಯೂ ನಿಯಂತ್ರಣ ಕುರಿತು ವಿಶೇಷ ಅಭಿಯಾನವನ್ನು ಇದೇ ತಿಂಗಳು 28 ರಿಂದ 30 ರ ವರೆಗೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಅವರು ಬಳಸುವ ಭಾಷೆಯಲ್ಲಿಯೇ ಆರೋಗ್ಯ ಶಿಕ್ಷಣ ನೀಡಬೇಕು. ನಾಟಕ, ಯಕ್ಷಗಾನ ಅಥವಾ ಸ್ಥಳೀಯ ಕಲೆಗಳನ್ನು ಬಳಸಿಕೊಂಡು ಡೆಂಗ್ಯೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಚಾರಪಡಿಸಬೇಕು ಎಂದರು.

Click Here

ರಬ್ಬರ್ ಹಾಗೂ ತೋಟಗಾರಿಕೆ ಇಲಾಖೆಗಳು ಸ್ಥಳೀಯ ತೋಟಗಗಳಲ್ಲಿ ನೀರುಗಳು ಅಡಿಕೆ ಹಾಳೆಗಳಲ್ಲಿ ಹಾಗೂ ರಬ್ಬರ್ ಪ್ರೊಸೆಸ್ಸಿಂಗ್ ಘಟಕಗಳಲ್ಲಿ ಅಥವಾ ಸಂಸ್ಕರಣಾ ಘಟಕಗಳಲ್ಲಿ ಒಂದು ವಾರಗಳ ಕಾಲ ನೀರು ನಿಲ್ಲದಂತೆ ರೈತರು ಕ್ರಮ ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಈ ವ್ಯಾಪ್ತಿಯಲ್ಲಿ ಶಂಕಿತ 244 ಪರೀಕ್ಷೆಗಳನ್ನು ಕೈಗೊಂಡಾಗ 51 ಜನರಿಗೆ ಡೆಂಗ್ಯೂ ಇರುವುದು ಕಂಡು ಬಂದಿದೆ. ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ರಕ್ತ ಪರೀಕ್ಷೆಯನ್ನು ಕೈಗೊಂಡು ವರದಿ ಶೀಘ್ರದಲ್ಲಿಯೇ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಕರಪತ್ರಗಳು ಸೇರಿದಂತೆ ಧ್ವನಿವರ್ಧಕಗಳ ಮೂಲಕ ನಿಯಂತ್ರಣ ಕ್ರಮದ ಕುರಿತು ಪ್ರಚಾರ ಪಡಿಸಬೇಕು. ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.

ಆರೋಗ್ಯ ಇಲಾಖೆಯ ವತಿಯಿಂದ ಡೆಂಗ್ಯೂ ರೋಗ ಲಕ್ಷಣ, ಅವುಗಳ ಹರಡುವಿಕೆ, ಸೊಳ್ಳೆಗಳ ಉತ್ಪಾದನೆ, ಅವುಗಳಿಂದ ಈ ರೋಗಗಳ ಹರಡುವಿಕೆಯ ಬಗ್ಗೆ, ಅವುಗಳ ಚಿಕಿತ್ಸೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಕಿರು ಚಿತ್ರಗಳನ್ನು ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಾಪ್‌ಗಳ ಮೂಲಕ ಸ್ಥಳೀಯ ಜನರಿಗೆ ತಲುಪುವಂತೆ ಕ್ರಮ ವಹಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನಾನಸ್ ಬೆಳಯುವ ಜಮೀನುಗಳಲ್ಲಿ, ಅನಾನಸ್ ಗಿಡಗಳ ಕೆಳಗೆ ನಿಲ್ಲುವ ಅಲ್ಪ ಪ್ರಮಾಣದ ನೀರಿನಲ್ಲಿ ಸಹ ಸೊಳ್ಳೆಗಳ ಸಂತಾತೋತ್ಪತ್ತಿ ನಡೆಯಲಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಶಾಂತ್ ಭಟ್, ಕುಂದಾಪುರ ತಾಲೂಕು ವೈದ್ಯಾಧಿಕಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here