ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸಮಾಜವೇ ಒಪ್ಪಿದ್ದ ಮುತ್ಸದ್ಧಿಯಾಗಿದ್ದ ಎ.ಜಿ.ಕೊಡ್ಗಿಯವರು ರಾಜ್ಯದ ಅನೇಕ ಯುವಕರಿಗೆ ಮಾರ್ಗದರ್ಶಕರಾಗಿದ್ದವರು. ನೇರ ನಡೆ-ನುಡಿಯ ಮೂಲಕ ಸಾಮಾಜಿಕ ಕ್ಷೇತ್ರದ ಶುಭ್ರ ತಪಸ್ವಿ ಅವರಾಗಿದ್ದರು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಬಿಜೆಪಿ ಕುಂದಾಪುರ ಮಂಡಲದ ವತಿಯಿಂದ ನಡೆದ ದಿ.ಎ.ಜಿ.ಕೊಡ್ಗಿ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು, ಬದುಕನ್ನ ಸಾರ್ಥಕತೆಯನ್ನಾಗಿಸಿಕೊಂಡವರು ಕೊಡ್ಗಿಯವರು. ಗ್ರಾಮಾಭಿವೃದ್ಧಿ ಕನಸನ್ನು ಕಂಡು ಅದನ್ನು ನನಸಾಗಿಸಿದವರು. ಸಮಾಜಕ್ಕಾಗಿ ದುಡಿದವರು ನಿತ್ಯ ಸ್ಮರಣೀಯರಾಗಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ.ಕಿಶೋರಕುಮಾರ ಅವರು, ಕೊಡ್ಗಿಯವರು ಅಧಿಕಾರಕ್ಕಾಗಿ ರಾಜಕೀಯವನ್ನು ಎಂದೂ ವೇದಿಕೆಯನ್ನಾಗಿಸಿಕೊಂಡಿರಲಿಲ್ಲ.ಮೌಲ್ಯಾಧಾರಿತ ಬದುಕನ್ನ ಕಟ್ಟಿಕೊಂಡಿದ್ದ ಅವರು ನಂಬಿದ್ದ ಸಿದ್ಧಾಂತದೊಂದಿಗೆ ರಾಜಿಯಾಗುತ್ತಿರಲಿಲ್ಲ. ಅಭಿವೃದ್ಧಿ ಪರವಾದ ನಿಲುವನ್ನು ರೂಢಿಸಿಕೊಂಡಿದ್ದರು. ಚಿಂತನೆ, ಪ್ರಯೋಗ, ಪ್ರದರ್ಶನದ ಮೂಲಕ ಜೀವನ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದವರು ಕೊಡ್ಗಿಯವರು ಎಂದರು.
ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಿಶ್ವಸ್ಥ ಮಂಡಳಿ ಸದಸ್ಯ ಕೆ.ಪ್ರೇಮಾನಂದ ಶೆಟ್ಟಿ ಕಟ್ಕೆರೆ. ಪುರಸಭೆ ಮಾಜಿ ಅಧ್ಯಕ್ಷ ಕೆ.ಮೋಹನದಾಸ್ ಶೆಣೈ, ಎ.ಜಿ.ಕೊಡ್ಗಿಯವರ ಒಡನಾಡಿ ಶೇಷಗಿರಿ ಗೋಟ ಮಾತನಾಡಿದರು.
ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರೋಜ ಪೂಜಾರಿ, ಬೀಜಾಡಿ ಗ್ರಾಮ ಪಂಚಾಯಿತಿ ಸುಮತಿ ನಾಗರಾಜ್ ಇದ್ದರು.
ಅಶೋಕ್ ಸಾರಂಗ್ ಭಾವಗೀತೆ ಹಾಡಿದರು. ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಂದಿಸಿದರು.











