ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯ ಪ್ರೀಮಿಯಂ ಪಾವತಿ ಅವಧಿ ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

0
17

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಬೆಂಗಳೂರು :ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹವಾಮಾನಾಧಾರಿತ ಬೆಳೆ ವಿಮೆ (WBCIS) ಯೋಜನೆಯ ಪ್ರೀಮಿಯಂ ಪಾವತಿಸಲು ನಿಗದಿಪಡಿಸಿರುವ ಅಂತಿಮ ದಿನಾಂಕವನ್ನು ತಕ್ಷಣ ವಿಸ್ತರಿಸುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಜುಲೈ ಅಂತ್ಯದ ವೇಳೆಗೆ ಸಾಮಾನ್ಯವಾಗಿ 249 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 165 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.34 ರಷ್ಟು ಮಳೆ ಕೊರತೆ ದಾಖಲಾಗಿದೆ. ಮಳೆಯ ಅಭಾವದಿಂದ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಅನೇಕ ಕಡೆಗಳಲ್ಲಿ ಬೆಳೆಗಳು ಸಮರ್ಪಕವಾಗಿ ಬೆಳೆಯದೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಶೇ.44 ರಷ್ಟು ಮಳೆ ಕೊರತೆ ದಾಖಲಾಗಿದ್ದು, ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
2026–27ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಕಾಳು ಮೆಣಸು, ಶುಂಠಿ ಹಾಗೂ ಮಾವು ಬೆಳೆಗಳಿಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರಿಗೆ ನಿಗದಿತ ಅವಧಿಯೊಳಗೆ ಪ್ರೀಮಿಯಂ ಪಾವತಿಸುವುದು ಕಷ್ಟಕರವಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಮಾಪನ ಕೇಂದ್ರಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಸದರು ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದರು. ಜಿಲ್ಲೆಯ 280 ಮಳೆಮಾಪನ ಯಂತ್ರಗಳಲ್ಲಿ ಕೇವಲ 112 ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಪರಿಣಾಮ ಈಗಾಗಲೇ 205 ಯಂತ್ರಗಳು ಪುನಃ ಕಾರ್ಯನಿರ್ವಹಿಸುತ್ತಿವೆ. ಉಳಿದ 75 ಯಂತ್ರಗಳಲ್ಲಿ 34 ಯಂತ್ರಗಳನ್ನು ಹೊಸದಾಗಿ ಅಳವಡಿಸಲಾಗುತ್ತಿದ್ದು, ಉಳಿದ 41 ಯಂತ್ರಗಳನ್ನು ಆಗಸ್ಟ್ 5ರೊಳಗೆ ದುರಸ್ತಿಪಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಿದ್ದಾರೆ.
ಈ ಹಿಂದೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಬೆಳೆ ವಿಮೆ ನೋಂದಣಿಗೆ ಅವಕಾಶವಿದ್ದರೂ, ಈ ಬಾರಿ ರೈತರು ಸಾಲ ಪಡೆದಿರುವ ಬ್ಯಾಂಕ್ ಅಥವಾ ಸಹಕಾರ ಸಂಘಗಳಲ್ಲಿಯೇ ಪ್ರೀಮಿಯಂ ಪಾವತಿಸಬೇಕಾದ ಕಾರಣ ಬ್ಯಾಂಕ್‌ಗಳಲ್ಲಿ ಒತ್ತಡ ಹೆಚ್ಚಾಗಿದೆ. ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ಅಡಚಣೆಗಳಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ಪ್ರೀಮಿಯಂ ಪಾವತಿ ದಿನಾಂಕವನ್ನು ಕನಿಷ್ಠ ಕೆಲವು ವಾರಗಳವರೆಗೆ ವಿಸ್ತರಿಸಿ, ಯಾವುದೇ ರೈತ ವಿಮಾ ಸೌಲಭ್ಯದಿಂದ ವಂಚಿತರಾಗದಂತೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಆಗ್ರಹಿಸಿದ್ದಾರೆ.

Click Here

LEAVE A REPLY

Please enter your comment!
Please enter your name here