ಅಕ್ರಮ ಅಡಿಕೆ ಆಮದನ್ನು ತಡೆದು ಅಡಿಕೆ ಬೆಳೆಗಾರರ ಹಿತ ರಕ್ಷಿಸಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕರ್ನಾಟಕದ ಸಂಸದರ ನಿಯೋಗ

0
47

Click Here

Click Here

ಹಿರಿಯ ನಾಯಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ, ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ರವರೊಂದಿಗೆ ಕ್ಯಾಂಪ್ಕೋ ಸದಸ್ಯರ ನಿಯೋಗ; ಅಡಿಕೆ ಬೆಳೆಗಾರರ ಹಿತರಕ್ಷಣೆ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿಕೆ

ನವದೆಹಲಿ ::ಹಿರಿಯ ನಾಯಕ, ಕರ್ನಾಟಕದ ಮಾಜಿ ಗೃಹ ಸಚಿವ ಮತ್ತು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಬಿಜೆಪಿ ಸಂಸದರು ಮತ್ತು ಕೇಂದ್ರ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (CAMPCO) ಪ್ರತಿನಿಧಿಗಳ ನಿಯೋಗ ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿ ಮಾಡಿ, ದೇಶೀಯ ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡುತ್ತಿರುವ ಅಕ್ರಮ ಅಡಿಕೆ ಆಮದು ಮತ್ತು ಕಳ್ಳಸಾಗಣೆ ತಡೆಯಲು ಬಲವಾದ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.

ಬಿಜೆಪಿ ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಮತ್ತು ಇತರ ಕ್ಯಾಂಪ್ಕೋ ಪ್ರತಿನಿಧಿಗಳು, ಕರ್ನಾಟಕ ಸೇರಿದಂತೆ ಅಡಿಕೆ ಬೆಳೆಯುವ ರಾಜ್ಯಗಳ ಲಕ್ಷಾಂತರ ರೈತ ಕುಟುಂಬಗಳು, ಅಕ್ರಮ ಅಡಿಕೆ ಆಮದಿನಿಂದಾಗಿ ಎದುರಿಸುತ್ತಿರುವ ಸವಾಲಿನ ಸಂಕಷ್ಟಮಯ ಪರಿಸ್ಥಿತಿಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಿ, ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಅಡಿಕೆ ಬೆಳೆಗಾರರ ಹಿತರಕ್ಷಿಸಬೇಕು ಎಂದು ಮನವಿ ಸಲ್ಲಿಸಿದರು. ಬೆಳೆ ರೋಗಗಳು, ಹೆಚ್ಚುತ್ತಿರುವ ವೆಚ್ಚ, ಕುಸಿಯುತ್ತಿರುವ ಉತ್ಪಾದಕತೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ರೈತರು, ಅಕ್ರಮ ವ್ಯಾಪಾರದಿಂದ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಅಗತ್ಯವನ್ನು ನಿಯೋಗ ಒತ್ತಿ ಹೇಳಿತು.

Click Here

ವಿದೇಶಿ ಮೂಲದ ಅಡಕೆಯನ್ನು ಗಡಿ, ಬಂದರುಗಳು ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಸಾಗಿಸುವ ಬಗ್ಗೆ ಹಾಗೂ ಆಮದು ವರ್ಗೀಕರಣಗಳು ಮತ್ತು ವ್ಯಾಪಾರ ದಾಖಲಾತಿಗಳ ಸಂಭಾವ್ಯ ದುರುಪಯೋಗದ ಬಗ್ಗೆ ಇದೇ ಸಂದರ್ಭದಲ್ಲಿ ನಿಯೋಗ ಗೃಹ ಸಚಿವರ ಗಮನ ಸೆಳೆಯಿತು. ಐಟಿಸಿ (ಎಚ್‌ಎಸ್) 20081991 ರ ಅಡಿಯಲ್ಲಿ ‘ಹುರಿದ ಒಣಹಣ್ಣುಗಳು ಮತ್ತು ಬೀಜಗಳು’ () ಎಂದು ಘೋಷಿಸಲಾದ ಸರಕುಗಳ ಸೂಕ್ಷ್ಮ ಪರಿಶೀಲನೆ ನಡೆಸಬೇಕು ಎಂದು ನಿಯೋಗ ನಿರ್ದಿಷ್ಟ ಕೋರಿಕೆ ಸಲ್ಲಿಸಿತು. ಸುರಕ್ಷತಾ ಕ್ರಮಗಳನ್ನು ತಪ್ಪಿಸಲು ಕೇವಲ ಹೆಸರಿಗೆ ಮಾತ್ರ ಸಂಸ್ಕರಿತ ಎಂದು ಹೇಳಲಾಗುತ್ತಿದೆ ಎನ್ನುವ ರೈತರ ಕಳವಳವನ್ನು ನಿಯೋಗ ವ್ಯಕ್ತಪಡಿಸಿತು. ಪ್ರತಿ ಕೆಜಿಗೆ ರೂ. 351 ಕನಿಷ್ಠ ಆಮದು ಬೆಲೆ (ಎಂಐಪಿ) ಕಟ್ಟುನಿಟ್ಟಾದ ಜಾರಿ ಮತ್ತು ಅಡಿಕೆ ಯಾವ ದೇಶದಿಂದ ಬರುತ್ತಿದೆ, ಅದರ ಘೋಷಿತ ಮೌಲ್ಯ ಮತ್ತು ರವಾನೆಗಳ ಮಾರ್ಗನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಬೇಕು ಎಂದು ಅವರು ನಿಯೋಗದ ಸದಸ್ಯರು ಒತ್ತಾಯಿಸಿದರು.

ಕನಿಷ್ಠ ಆಮದು ಬೆಲೆ ಸುರಕ್ಷತೆ ಸೇರಿದಂತೆ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ನಿರಂತರವಾಗಿ ಶ್ರಮಿಸುತ್ತಿರುವ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಮತ್ತು ಅವರ ಸರ್ಕಾರ ತೆಗೆದುಕೊಂಡ ರೈತ ಪರ ಕ್ರಮಗಳನ್ನು ಇದೇ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಶ್ಲಾಘಿಸಿದರು. ಇಂತಹ ರೈತ ಹಿತರಕ್ಷಣೆಯ ಪೂರಕ ಕ್ರಮಗಳು ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ದೇಶದೊಳಗೆ ನುಸುಳಿ ಬರುತ್ತಿರುವ ಅಕ್ರಮ ಅಡಿಕೆ ದೇಶೀಯ ಮಾರುಕಟ್ಟೆಗಳನ್ನು ತಲುಪುವುದನ್ನು ತಡೆಯಲು, ಪ್ರವೇಶ ಸ್ಥಳಗಳಲ್ಲಿ ಕಣ್ಗಾವಲು ಬಲಪಡಿಸುವುದರ ಜೊತೆಗೆ ಗೃಹ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆ, ಹಣಕಾಸು/ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ನ ಕೇಂದ್ರೀಯ ಮಂಡಳಿ (CBIC), ರೆವಿನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯ (DRI), ಕಸ್ಟಮ್ಸ್ ಮತ್ತು ಸಂಬಂಧಿತ ರಾಜ್ಯಗಳು ಸಚಿವಾಲಯವನ್ನು ಒಳಗೊಂಡಂತೆ ವ್ಯವಸ್ಥಿತ ಕಾರ್ಯತಂತ್ರವನ್ನು ಸ್ಥಾಪಿಸಲು ನಿಯೋಗ ಕೋರಿತು. “ನಮ್ಮ ರೈತರು ಯಾವುದೇ ಹೆಚ್ಚಿನ ವಿಶೇಷ ಅನುಕೂಲಗಳನ್ನು ಕೇಳುತ್ತಿಲ್ಲ. ಅವರು ನ್ಯಾಯಯುತ ಮಾರುಕಟ್ಟೆ ಮತ್ತು ಅಸ್ತಿತ್ವದಲ್ಲಿರುವ ಕಾನೂನಿನ ಕಟ್ಟುನಿಟ್ಟಿನ ಜಾರಿಯನ್ನು ಮಾತ್ರ ಕೇಳುತ್ತಿದ್ದಾರೆ” ಎಂದು ಹೇಳಿರುವ ನಿಯೋಗ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಮತ್ತು ಗೃಹ ಸಚಿವ ಶ್ರೀ ಅಮಿತ್ ಶಾ ಜಿ ಅವರ ನೇತೃತ್ವದಲ್ಲಿ ದೇಶದ ನೈಜ ಅಡಿಕೆ ಬೆಳೆಗಾರರ ಹಿತಾಸಕ್ತಿಗಳನ್ನು ನಿಶ್ಚಿತವಾಗಿ ರಕ್ಷಿಸಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿತು.

Click Here

LEAVE A REPLY

Please enter your comment!
Please enter your name here