ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೋಸ್ಕರ ಯುವ ಮನಸ್ಸು ಮತ್ತು ಡಿಜಿಟಲ್ ಪ್ರಪಂಚ ಎಂಬ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಹದಿಹರೆಯಕ್ಕೆ ಕಾಡುವ ವಿವಿಧ ಸಮಸ್ಯೆಗಳು ಮತ್ತು ಅದರಿಂದ ಹೊರಬರುವ ಬಗ್ಗೆ ಎ ವಿ ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇದರ ಆಪ್ತ ಸಮಾಲೋಚಕಿ ವಿದ್ಯಾಶ್ರೀ ಅವರು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತ ಹದಿಹರೆಯವು ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಸೂಕ್ಷ್ಮಹಾಗೂ ಪರಿವರ್ತನೆಯ ಕಾಲವಾಗಿದೆ. ಆಧುನಿಕ ಕಾಲಘಟ್ಟದಲ್ಲಿ, ಶಿಕ್ಷಣದತ್ತ,ಸಮಾಜದತ್ತ ಮುಖ ಮಾಡುವ ಹೆಣ್ಣು ಜಾಗ್ರತಾವಸ್ಥೆಯಲ್ಲಿ ಇಂದು ಹೆಜ್ಜೆ ಹಾಕಬೇಕಾಗಿದೆ. ಭೌತಿಕವಾಗಿ, ಮಾನಸಿಕವಾಗಿ ಬೆಳೆಯುವ ಈ ಹಂತದಲ್ಲಿ ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೆ ವಿಚಾರ ವಿಮರ್ಶೆಗಳ ಮೂಲಕ ತನ್ನ ಸ್ಥಾನವನ್ನು ಕಾಯ್ದುಕೊಳ್ಳಬೇಕಾಗಿದೆ. ತಮ್ಮೆದುರಿಗಿರುವ ತಂತ್ರಜ್ಞಾನವನ್ನು ಸದ್ಭಳಕೆ ಮಾಡಿಕೊಂಡು ಶಿಕ್ಷಕರ ಮತ್ತು ಪೋಷಕರ ಮಾರ್ಗದರ್ಶನದೊಂದಿಗೆ ಉತ್ತಮ ಸಾಧನೆ ಮಾಡುತ್ತಾ ಸಮಾಜದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂದರು. ವಿದ್ಯಾರ್ಥಿನಿಯರೊಂದಿಗೆ ಆಸ್ತ ಸಮಾಲೋಚನೆ ನಡೆಸಿ ಮಕ್ಕಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ರೂಪಾ ಶೆಣೈಯವರು ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು..
ಕಾಲೇಜು ಪ್ರಾಂಶುಪಾಲರಾದ ಸಂದೀಪ್ ನಾಯಕ್ ರವರು ಕಾರ್ಯಾಗಾರಕ್ಕೆ ಶುಭ ಕೋರಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಾಪಕರು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ವಿದ್ಯಾರ್ಥಿನಿ ತನುಶ್ರೀ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮಿ ಪ್ರಿಯ ವಂದಿಸಿದರು.












