1 ರಿಂದ 19 ವರ್ಷದೊಳಗಿನವರಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

0
462

Click Here

Click Here

ಕುಂದಾಪುರ ಮಿರರ್ ಸುದ್ದಿ…

ಉಡುಪಿ : ಆಗಸ್ಟ್ 10 ರಂದು ಜಿಲ್ಲೆಯ 1 ರಿಂದ 19 ವರ್ಷದೊಳಗಿನವರಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸಲು ಅಗತ್ಯ ಸಿದತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯವಾಗಿ ಜಂತುಹುಳುಗಳು ಮಣ್ಣಿನ ಮೂಲಕ ಜನರಿಗೆ ಹರಡುವಂತಹದ್ದಾಗಿದ್ದು, ಇದರ ಸೋಂಕಿನಿಂದಾಗಿ ಮನುಷ್ಯನಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉಂಟಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಸರ್ಕಾರ 19 ವರ್ಷದೊಳಗಿನವರಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ಅಲ್ಬೆಂಡೋಜೋಲ್ ಮಾತ್ರೆಯನ್ನು ವಿತರಿಸುತ್ತಿದೆ ಎಂದರು.

ಜಂತಹುಳು ಭಾದೆಯಿಂದಾಗಿ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಕುಗ್ಗಿ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸುತ್ತದೆ, ವಿಶೇಷವಾಗಿ ಮಕ್ಕಳು ಜಂತುಹುಳು ಸೋಂಕಿನಿಂದಾಗಿ ದಣಿದಂತಾಗಿ ಅಥವಾ ಅನಾರೋಗ್ಯ ಪೀಡಿತರಾಗಿ ಶಾಲೆಗೆ ಗೈರು ಆಗುವ ಸಾಧ್ಯತೆಗಳಿರುತ್ತವೆ ಎಂದರು.

ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸಲು ಅಗತ್ಯ ಪ್ರಮಾಣದ ದಾಸ್ತಾನು ಇಟ್ಟುಕೊಳ್ಳುವುದರೊಂದಿಗೆ ಅಂಗನವಾಡಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಮೂಲಕ ಅವರ ಸಮ್ಮುಖದಲ್ಲಿ ಸೇವನೆ ಮಾಡಲು ಕ್ರಮ ಕೈಗೊಳ್ಳಬೇಕು, ಸಣ್ಣ ಮಕ್ಕಳಿದ್ದಲ್ಲಿ ಅವರುಗಳಿಗೆ ಮಾತ್ರೆಯನ್ನು ಪುಡಿ ಮಾಡುವುದರೊಂದಿಗೆ ಸೇವನೆಗೆ ನೀಡಬೇಕು ಎಂದರು.

Click Here

ಶಾಲಾ ಕಾಲೇಜುಗಳಿಂದ ಹೊರಗುಳಿದ 19 ವರ್ಷ ವಯೋಮಿತಿಯವರಿಗೆ ಅಂಗನವಾಡಿಗಳಲ್ಲಿ ಮಾತ್ರೆಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಗುರುತಿಸಿ ನೀಡಬೇಕು ಎಂದ ಅವರು , ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಪಡಿಸಿ ಅರ್ಹ ವ್ಯಕ್ತಿಗಳು ಇದರ ಪ್ರಯೋಜನ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.

ಒಂದೊಮ್ಮೆ ಆಗಸ್ಟ್ 10 ರಂದು ಕಾರಣಾಂತರಗಳಿಂದ ಮಾತ್ರೆ ಪಡೆಯಲು ಸಾಧ್ಯವಿಲ್ಲದಂತಹವರಿಗೆ ಆಗಸ್ಟ್ 17 ರಂದು ವಿತರಿಸಲು ಮುಂದಾಗಬೇಕು ಈ ಜಂತುಹುಳು ನಿವಾರಣಾ ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳು ಸಹಕರಿಸಬೇಕೆಂದು ಸೂಚನೆ ನೀಡಿದರು.

ಆಗಸ್ಟ್ 1 ರಿಂದ 15 ರ ವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವುದರ ಜೊತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಓಆರ್‍ಎಸ್ ಪೊಟ್ಟಣಗಳ್ನು ನೀಡುವುದುರ ಜೊತೆಗೆ ಅವುಗಳನ್ನು ತಯಾರಿಸುವ ವಿಧಾನವನ್ನೂ ಸಹ ತಿಳಿಸಲಿದ್ದಾರೆ ಎಂದರು.

ಸ್ವಚ್ಛತೆಯನ್ನು ಕಾಪಾಡಿದ್ದಲ್ಲಿ ಮಾತ್ರ ಅತಿಸಾರ ಭೇಧಿಯಿಂದ ದೂರ ಉಳಿಯಲು ಸಾಧ್ಯ ಈ ಹಿನ್ನಲೆ ಶಾಲಾ ಮಕ್ಕಳಿಗೆ ಕೈಗಳನ್ನು ಸ್ವಚ್ಛಗೊಳಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುವುದು ಎಂದ ಅವರು ಪ್ರತಿಯೊಬ್ಬ ಸಾರ್ವಜನಿಕರೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಡಿಹೆಚ್‍ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ .ರಾಮ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here