ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಮರವಂತೆಯ ನದಿ-ಕಡಲು ನಡುವಿನ, ಹೆದ್ದಾರಿ ಅಂಚಿನ ಮಾರಸ್ವಾಮಿಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಗುರುವಾರ ಸಂಪನ್ನಗೊಂಡಿತು.

ಮಳೆ ಬಿಡುವು ನೀಡಿದ್ದರಿಂದ ಬೆಳಗಿನಿಂದಲೇ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತು. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ, ಅರ್ಪಣೆ ಸಲ್ಲಿಸಿದರು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಾಲಯದೊಳಗೆ ಆಡಳಿತ ಮಂಡಳಿ ಮತ್ತು ಸೇವಾ ವರ್ಗದ ಸದಸ್ಯರು ಸ್ವಯಂಸೇವಕರ ಜತೆ ಸೇರಿ ಶುಚಿತ್ವ, ಪೂಜೆ, ಭಕ್ತರ ಆಗಮನ-ನಿರ್ಗಮನ, ಪ್ರಸಾದ ವಿತರಣೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಆಕರ್ಷಕ ಪುಷ್ಪಾಲಂಕಾರ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿತು.
ಒಂದೆಡೆ ಸಮುದ್ರ, ಇನ್ನೊಂದೆಡೆ ನದಿ, ನಡುವೆ ಹಾದು ಹೋಗುವ ಹೆದ್ದಾರಿ ಕಾರಣದಿಂದ ತೀರ ಕಿರಿದಾದ ಭೂಪ್ರದೇಶದ ಇಲ್ಲಿ ಅಮಾವಾಸ್ಯೆಯ ಪರ್ವದಲ್ಲಿ ಪಾಲ್ಗೊಳ್ಳಲು ಬರುವ ಸಹಸ್ರಾರು ಭಕ್ತರ ಸುರಕ್ಷತೆಗಾಗಿ ಮತ್ತು ಹೆದ್ದಾರಿಯಲ್ಲಿ ಎಡೆಬಿಡದೆ ಸಂಚರಿಸುವ ವಾಹನಗಳ ಜತೆಗೆ ಜಾತ್ರೆಗೆ ಬರುವ ಅಸಂಖ್ಯ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಜನದಟ್ಟಣೆಯ ನಿಯಂತ್ರಣ, ಸಮುದ್ರ ಮತ್ತು ನದಿಸ್ನಾನ ಮಾಡುವವರ ಬಗೆಗೆ ವಹಿಸಬೇಕಾದ ಎಚ್ಚರದ ಕುರಿತು ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಕುಂದಾಪುರ ಸಂಚಾರಿ ಪೋಲಿಸರು ಅಗತ್ಯ ಕ್ರಮಕೈಗೊಂಡಿದ್ದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಪೂಜಾರಿ ಸಹಿತ ಹಲವರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ.ನಾಯಕ್ ಹಾಗೂ ಸದ್ಯರು, ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು. ಕುಂದಾಪುರ ಡಿವೈಎಸ್‍ಪಿ ಶ್ರೀಕಾಂತ್, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಂತೆ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ್ ಹಾಗೂ ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷರು ಬಂದೋಬಸ್ತ್ ಮಾಡಿದ್ದರು.











