ಮಕ್ಕಳು ಪಲ್ಸ್ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ

0
86

Click Here

Click Here

ಕುಂದಾಪುರ ಮಿರರ್ ಸುದ್ದಿ…
ಉಡುಪಿ : ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವು ಜೂನ್ 28 ರಂದು ನಡೆಯಲಿದ್ದು, 0-5 ವರ್ಷದೊಳಗಿನ ಯಾವುದೇ ಮಗುವು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಾದ್ಯಂತ ಜೂನ್ 28 ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಪ್ರತಿಯೊಬ್ಬ ಪೋಷಕರು ತಪ್ಪದೇ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದರೊಂದಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ದೇಶದಲ್ಲಿ 2011 ರ ಜನವರಿ 13 ರಲ್ಲಿ ಕೊನೆಯದಾಗಿ ಪೋಲಿಯೋ ಪ್ರಕರಣ ವರದಿಯಾಗಿದ್ದು ನಂತರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. 2014 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಕೆಲವು ಪೋಲಿಯೊ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚಿನ ನಿಗಾ ವಹಿಸುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದ ಅವರು, ಪೋಲಿಯೋ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಜಿಲ್ಲೆಯಲ್ಲಿ ಪೋಲಿಯೊ ಮತ್ತು ದಡಾರ ನಿರ್ಮೂಲನೆ ಮಾಡುವಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರಬಾರದು. ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಿ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಕಳೆದ ಸಾಲಿನ ಡಿಸೆಂಬರ್ ನಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 65,401 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.103 ರಷ್ಟು ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದ ಅವರು, ಜೂನ್‌ನಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು ಅಂದಾಜು 63,524 ಮಕ್ಕಳನ್ನು ಗುರುತಿಸಲಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. ಮಕ್ಕಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 668 ಲಸಿಕಾ ಕೇಂದ್ರಗಳ ಜೊತೆಯಲ್ಲಿ ಟ್ರಾನ್ಸಿಟ್ 18 ಬೂತುಗಳು, 5 ಮೊಬೈಲ್ ಟೀಮ್‌ಗಳಿದ್ದು, 1363 ತಂಡಗಳು ಹಾಗೂ 155 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ಲಸಿಕಾ ದಿನದಂದು ಲಸಿಕೆ ನೀಡಲು ಗುರುತಿಸಲಾದ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕೇಂದ್ರಗಳನ್ನು ತೆರೆಯಲು ಸಜ್ಜುಗೊಳಿಸಿಟ್ಟುಕೊಳ್ಳಬೇಕು. ಕಾರ್ಯಕ್ರಮವು ರವಿವಾರ ವಾಗಿರುವ ಹಿನ್ನೆಲೆ, ರೈಲ್ವೆ ನಿಲ್ದಾಣ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಟೋಲ್ ಗೇಟ್‌ಗಳಲ್ಲಿ ಬೂತ್‌ಗಳನ್ನು ತೆರೆಯಲು ಅನುವು ಮಾಡಿಕೊಡಬೇಕು ಎಂದ ಅವರು, ಲಸಿಕೆಯ ಸುರಕ್ಷಿತ ದಾಸ್ತಾನಿನ ಬಗ್ಗೆ ಗಮನ ಹರಿಸುವುದರೊಂದಿಗೆ ಲಸಿಕೆ ಹಾಳಾಗದಂತೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಲಸೆ, ಕಟ್ಟಡ ಹಾಗೂ ಮತ್ತಿತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕಾ ಪಡೆಯುವಂತೆ ಹೆಚ್ಚು ಜಾಗೃತಿ ಮೂಡಿಸಬೇಕು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ನೀಡಬೇಕು. ಪಲ್ಸ್ ಪೊಲೀಯೋ ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಮೆಸ್ಕಾಂ, ಸಾರಿಗೆ, ರೈಲ್ವೆ, ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದರು.
ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಗರ್ಭಕಂಠ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಲು ಜಿಲ್ಲೆಯ ಎಲ್ಲಾ 14 ವರ್ಷ ಮೇಲ್ಪಟ್ಟ 15 ವರ್ಷದೊಳಗಿನ ಹೆಣ್ಣು ಮಕ್ಕಳು ಹೆಚ್.ಪಿ.ವಿ ಲಸಿಕೆಯನ್ನು ಪಡೆಯುವಂತೆ ಪೋಸ್ಟರ್‌ಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಪೋಷಕರಿಗೆ ಲಸಿಕೆಯು ಸುರಕ್ಷಿತವಾಗಿರುವ ಕುರಿತು ಮನದಟ್ಟು ಮಾಡಿಸಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here