ಕುಂದಾಪುರ ಮಿರರ್ ಸುದ್ದಿ…
ಕೋಟ: ಶಾಲೆಯ ಚಿಣ್ಣರನ್ನು ನೋಡಿದರೆ 80 ವರ್ಷದ ಹಿಂದಿನ ನನ್ನ ಬಾಲ್ಯದ ನೆನಪಾಗುತ್ತಿದೆ. ಹಿಂದಿನ ಕಾಲದಲ್ಲಿ ಹಗಲೊಂದು ಶಾಲೆ, ರಾತ್ರಿಯೊಂದು ಶಾಲೆ. ಹಗಲಿನ ಶಾಲೆಯಲ್ಲಿ ಪರೀಕ್ಷೆಗೆ, ಹಾಗೂ ಹುದ್ದೆಗೆ ಬೇಕಾಗುವ ಶಿಕ್ಷಣ ಸಿಗುತ್ತಿತ್ತು. ರಾತ್ರಿಯ ಶಾಲೆಯಲ್ಲಿ ಜೀವನಾದರ್ಶವನ್ನು, ಬದುಕಿನ ಪರೀಕ್ಷೆಯಲ್ಲಿ ಪಾಸಾಗುವ ರೀತಿಯನ್ನು, ಯಕ್ಷಗಾನ ಶಾಲೆಯಲ್ಲಿ ಕಲಿಸಲಾಗುತ್ತಿತ್ತು. ಯಕ್ಷಗಾನದಲ್ಲಿ ಕುಣಿತ ಇದೆ, ಹಾವ-ಭಾವವಿದೆ, ಮಾತುಗಾರಿಕೆ ಇದೆ. ಪೌರಾಣಿಕ ಆಖ್ಯಾನದ ಅಭ್ಯಾಸದಿಂದ ಬದುಕಿನಲ್ಲಿ ರಾಮನ ಹಾಗಿರಬೇಕು, ಧರ್ಮರಾಯನ ಎಲ್ಲರಿಗೂ ಬೇಕೆನಿಸಿಕೊಂಡಿರಬೇಕು, ಕೃಷ್ಣನಾಗಿ ಎಲ್ಲರಿಗೂ ಉಪಕಾರ ಮಾಡಿಕೊಂಡಿರಬೇಕು, ಶಕುನಿಯಂತಾಗಬಾರದು, ಸೀತೆಯಂತೆ ಸಾಧ್ವಿಯಾಗಬೇಕು ಎನ್ನುವುದನ್ನೆಲ್ಲ ನಮ್ಮ ಕಾಲದ ಮಕ್ಕಳಿಗೆ ಹೇಳಿಕೊಟ್ಟದ್ದು ಯಕ್ಷಗಾನ. ಶಾಲಾ ಮಕ್ಕಳಿಗೆ ಯಕ್ಷಗಾನದ ಪೂರ್ವರಂಗ ಪ್ರಾತ್ಯಕ್ಷಿಕೆಯನ್ನು ಯಶಸ್ವಿ ಕಲಾವೃಂದ ಪರಿಚಯಿಸುವ ಮೂಲಕ ಯಕ್ಷಗಾನವನ್ನು ಅಭ್ಯಾಸ ಮಾಡಬೇಕೆಂಬ ಕಿವಿ ಮಾತನ್ನು ಸಂಸ್ಥೆ ಸಾರುತ್ತಿದೆ. ಬರೇ ನೋಡುವುದಕ್ಕಲ್ಲ, ಇವರಂತೆ ಇಂದಿನ ಮಕ್ಕಳೂ ಪಾತ್ರಧಾರಿಗಳಾಗಬೇಕು ಎಂದು ಸಾಲಿಗ್ರಾಮ ಮಕ್ಕಳ ಮೇಳದ ಗುರುಗಳಾದ ಶ್ರೀಧರ ಹಂದೆ ಕೋಟ ಅಭಿಪ್ರಾಯ ಪಟ್ಟರು.

ಸೆ.5ರಂದು ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದವರಿಂದ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿ ಇಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ, ಹಿರಿಯ ಯಕ್ಷಗಾನ ಗುರುಗಳಾದ ಶ್ರೀಧರ ಹಂದೆ ಕೋಟ ಇವರು ಚಂಡೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನ್ನಾಡಿದರು.
ಶಾಲಾ ಶಿಕ್ಷಕಿ ಸುಮತಿ, ಎಸ್‍ಡಿಎಂಸಿ ಅಧ್ಯಕ್ಷ ಶಂಕರ ದೇವಾಡಿಗ, ಯಶಸ್ವಿ ಕಲಾವೃಂದದ ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಕು| ಪೂಜಾ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಶಸ್ವಿ ಕಲಾವೃಂದದ ಕಲಾವಿದರಿಂದ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ ರಂಗದಲ್ಲಿ ಪ್ರಸ್ತುತಿಗೊಂಡಿತು.











