ಕುಂದಾಪುರ ಮಿರರ್ ಸುದ್ದಿ…
ಕೋಟೇಶ್ವರ: “ದ್ರಾವಿಡ ಬ್ರಾಹ್ಮಣ ಪರಿಷತ್ತು ಕೋಟೇಶ್ವರ ವಲಯ ವ್ಯಾಪ್ತಿಯಲ್ಲಿ ಮಾತ್ರವಲ್ಲದೇ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲೂ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ವಲಯದ ಸಮಾಜಮುಖಿ ಸಾಧನೆಗಳನ್ನೂ ಅಷ್ಟೇ ಎತ್ತರಕ್ಕೆ ಒಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಸದಸ್ಯರಿಗೂ ಇದೆ. ಇದನ್ನರಿತು ಮುಂದಿನ ದಿನಗಳಲ್ಲಿ ಕಾರ್ಯಾಚರಿಸಬೇಕು” – ಎಂದು ದ್ರಾವಿಡ ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್ ಕರೆನೀಡಿದರು.
ಕೋಟೇಶ್ವರ ರಥಬೀದಿಯ ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆದ ವಲಯದ ಪ್ರಥಮ ಕಾರ್ಯಕಾರೀ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಲಯದಲ್ಲಿ ಆಚರಿಸಿದ ಬಗ್ಗೆ ತಿಳಿಸಿದ ಅವರು, ವಲಯದ ಮಹಿಳಾ ವೇದಿಕೆ ಮತ್ತು ಯುವ ವಿಪ್ರ ವೇದಿಕೆಗಳ ಸದಸ್ಯರ ಹಾಜರಾತಿ ಕಡಿಮೆ ಇರುವುದನ್ನು ಉಲ್ಲೇಖಿಸಿ, ಮುಂದಿನ ಸಭೆಗಳಿಗೆ ಎಲ್ಲರೂ ಹಾಜರಾಗಬೇಕು ಎಂದು
ಸೂಚಿಸಿದರು.
ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಮಾತನಾಡಿ, ಸೆ.17ರ ಶನಿವಾರ ಕುಂದಾಪುರದ ಶ್ರೀ ಕುಂದೇಶ್ವರ ದೇವಳ ಸಭಾಂಗಣದಲ್ಲಿ ನಡೆಯಲಿರುವ ತಾಲೂಕು ಪರಿಷತ್ ಮಹಿಳಾ ಸಮಾವೇಶದಲ್ಲಿ ಸನ್ಮಾನಕ್ಕೆ ಅರ್ಹರಾಗಿರುವ ಸಾಧಕರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ವಿವರ ನೀಡಬೇಕೆಂದು ಮನವಿ ಮಾಡಿದರು.
ವಲಯವು ರಚನಾತ್ಮಕವಾದ ಕಾರ್ಯಗಳಿಂದ ವಿಪ್ರ ಸಮೂಹದ ಅಭಿವೃದ್ಧಿಗೆ ಪುರಕವಾಗುವಂತೆ ಮತ್ತು ಸಂಘಟನೆಯು ಸದೃಢವಾಗುವಂತೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಸಭಿಕರು ಸೂಕ್ತ ಸಲಹೆ – ಸೂಚನೆಗಳನ್ನು ನೀಡಿದರು. ತಾಲೂಕು ಸಮಾವೇಶದಲ್ಲಿ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾದ ಸಾಧಕರ ಆಯ್ಕೆ, ಶಿಕ್ಷಕರ ದಿನಾಚರಣೆ ಬಗ್ಗೆ ಚರ್ಚಿಸಲಾಯಿತು.
ಆರಂಭದಲ್ಲಿ ಸ್ವಾಗತಿಸಿದ ಕಾರ್ಯದರ್ಶಿ ನಾಗೇಂದ್ರ ಬಿಳಿಯ, ಸೆ.4 ರ ಭಾನುವಾರ ಕುಂಭಾಶಿಯ ಶ್ರೀ ಹರಿಹರ ದೇವಾಲಯದಲ್ಲಿ ನಡೆಯಲಿರುವ ಆಯರ್ಕೊಡ ಸೇವೆಯಲ್ಲಿ ವಲಯದ ಸದಸ್ಯರೆಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ರಾಘವೇಂದ್ರ ರಾವ್, ಗೌರವಾಧ್ಯಕ್ಷ ಗಣಪಯ್ಯ ಚಡಗ, ಯುವ ವಿಪ್ರ ವೇದಿಕೆಯ ಅಧ್ಯಕ್ಷ ನಾಗರಾಜ ಅಡಿಗ, ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನ ಉಡುಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ. ಕೆ. ವೆಂಕಟಕೃಷ್ಣ ಐತಾಳ, ವೆಂಕಟೇಶ ಅರಸ್, ವಾದಿರಾಜ ಅಡಿಗ, ಪರಿಷತ್ ಮುಖವಾಣಿಯಾದ ವಿಪ್ರವಾಣಿ ಪತ್ರಿಕಾ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ, ಗೌರವ ಸಲಹೆಗಾರರಾದ ವೈ. ಎನ್. ವೆಂಕಟೇಶಮೂರ್ತಿ ಭಟ್, ಎಚ್. ಶ್ರೀನಿವಾಸ ಮೂರ್ತಿ, ಕೆ. ಜಿ. ವೈದ್ಯ, ಅರುಂಧತಿ ವೈದ್ಯ, ಸುಧಾ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಖಜಾಂಚಿ ನಾಗೇಶ್ ರಾವ್ ವಂದಿಸಿದರು.











