ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ನಾಗೂರಿನ ಗೋಪಾಲಕೃಷ್ಣ ಕಲಾಮಂದಿರದ ಕೋಟ ವೈಕುಂಠ ನಾಯಕ್ ಸ್ಮರಣ ವೇದಿಕೆಯಲ್ಲಿ ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್ ಕಿರಿಮಂಜೇಶ್ವರ ವತಿಯಿಂದ ಸೆ.೧೮ರಿಂದ ಸೆ.೨೪ರವರೆಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ಜ್ಞಾನ ಯಜ್ಞವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ಘಾಟಿಸಲಿದ್ದಾರೆ.
ನಾಗೂರು ದಯಾನಂದ ಬಳಗಾರ್ ಅವರಿಗೆ ತೆಕ್ಕಟ್ಟೆ ಆನಂದ ಮಾಸ್ಟರ್ ಕಲಾತಪಸ್ವಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ , ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ತಿಳಿಸಿದ್ದಾರೆ.
ಟ್ರಸ್ಟ್ ವತಿಯಿಂದ ೨೦೧೬ರಿಂದ ಉಡುಪಿಯಲ್ಲಿ ಯಕ್ಷ ಅಷ್ಟಾಹ ಎಂದು ೮ ದಿನಗಳ ಕಾಲ ಯಕ್ಷಗಾನ ಬಯಲಾಟ ಪ್ರದರ್ಶನವನ್ನು ಪರ್ಯಾಯ ಮಠದ ಸಹಯೋಗದಲ್ಲಿ ನಡೆಸಲಾಗುತ್ತಿದ್ದು, ೨೦೧೩ರಿಂದ ಕಿರಿಮಂಜೇಶ್ವರದಲ್ಲಿ ತಾಳಮದ್ದಳೆ ಸಪ್ತಾಹವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಲಾವಿದರಿಗೆ ರಜತ ಸ್ಮರಣಿಕೆ ಸಹಿತ ಸಮ್ಮಾನ, ಸಹಾಯಧನ, ತೆಕ್ಕಟ್ಟೆ ಆನಂದ ಮಾಸ್ಟರ್ ನೆನಪಿನ ಕಲಾತಪಸ್ವಿ ಪ್ರಶಸ್ತಿ ಪ್ರದಾನ ಹೀಗೆ ಅನೇಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ತಾಳಮದ್ದಳೆ ಸಪ್ತಾಹವನ್ನು ಸೆ.೧೮ರಂದು ಗೃಹಸಚಿವರು ಉದ್ಘಾಟಿಸಿ, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಹಕಾರಿ ಯೂನಿಯನ್ ಅಧ್ಯಕ್ಷ ಎಸ್. ಜಯಕರ ಶೆಟ್ಟಿ ಇಂದ್ರಾಳಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್‌ಚಂದ್ರ ಶೆಟ್ಟಿ, ಉದ್ಯಮಿ ಉಮೇಶ್ ಕೋಟ ವೈಕುಂಠ ಆಗಮಿಸಲಿದ್ದಾರೆ.
ಪ್ರತಿದಿನ ಸಂಜೆ ೫ ಗಂಟೆಗೆ ತಾಳಮದ್ದಳೆ ನಡೆಯಲಿದ್ದು, ತೆಂಕು ಹಾಗೂ ಬಡಗಿನ ಖ್ಯಾತ ಕಲಾವಿದರಿಂದ ನಚಿಕೇತ, ವಾಮನ, ಭಾರ್ಗವರಾಮ, ಮಹಾಪ್ರಸ್ಥಾನ, ದೇವಯಾನಿ, ಕೃಷ್ಣಸಂಧಾನ, ವಿಭೀಷಣ ನೀತಿ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿದೆ.
ಸೆ.೨೪ರ ಸಮಾರೋಪ ಸಮಾರಂಭದಲ್ಲಿ ಜನಪದ ಪರಿಷತ್ತು ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ , ಉದ್ಯಮಿ ಸದಾನಂದ ಪ್ರಭು ರಾಯಚೂರು, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜನಾರ್ದನ ಹಂದೆ ಭಾಗವಹಿಸಲಿದ್ದಾರೆ ಎಂದು ಧಾರೇಶ್ವರರು ತಿಳಿಸಿದ್ದಾರೆ.











