ಕುಂದಾಪುರ ಮಿರರ್ ಸುದ್ದಿ…
ಕೋಟ :ಶಿಕ್ಷಣದ ಜೊತೆ ಜೊತೆಗೆ ಕಲೆ, ಸಾಹಿತ್ಯ, ಲಲಿತಕಲೆಗಳ ಯಾವುದಾದರೂ ಒಂದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಲ್ಲಿ ಬದುಕು ಉತ್ಸಾಹದಿಂದ ಕೂಡಿರುತ್ತದೆ ಎನ್ನುವುದಕ್ಕೆ ಶಿಕ್ಷಣ, ಯಕ್ಷಗಾನ, ನಾಟಕ, ಸಾಹಿತ್ಯ ರಂಗದಲ್ಲಿ ಬಾಲ್ಯದಿಂದಲೇ ತೊಡಗಿಸಿಕೊಂಡ ಹಿರಿಯರಾದ ಶ್ರೀಧರ ಹಂದೆಯವರೆ ನಿದರ್ಶನ. ಕನ್ನಡ ನಾಡು ಕಂಡ ಪ್ರಸಿದ್ಧ ಕವಿ ಮುದ್ದಣನ ಹೆಸರಿನ ಪ್ರಶಸ್ತಿ ಅರ್ಹ, ಯೋಗ್ಯ ವ್ಯಕ್ತಿಗೆ ಸಿಕ್ಕಿರುವುದು ಅಭೀನಂದನೀಯ” ಎಂದು ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.
ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ ಸಂಸ್ಥೆಯು ಪ್ರತಿವರ್ಷ ನೀಡುವ 2021 ರ ಸಾಲಿನ ಮಹಾ ಕವಿ ಮುದ್ದಣ ಪ್ರಶಸ್ತಿಗೆ ಭಾಜನರಾದ ಹಿಂದಿ ಶಿಕ್ಷಕ, ರಾಷ್ಟ್ರಪ್ರಶಸ್ತಿ ಪುರಸ್ಕøತ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಂಗಭೂಮಿ ಕಲಾವಿದ ಕೋಟದ ಎಚ್. ಶ್ರೀಧರ ಹಂದೆಯವರನ್ನು ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯ ಮರಾಠ ಹಾಸ್ಟೆಲ್ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ ಸಂಸ್ಥೆಯ ಅಧ್ಯಕ್ಷರಾದ ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕ್ ಸಲಹಾ ಮಂಡಳಿಯ ನಿರ್ದೇಶಕರಾದ ರಾಜೀವ ಶೆಟ್ಟಿ, ಕಾರ್ಯದರ್ಶಿ ಶ್ಯಾಮ ಸುಂದರ ಐತಾಳ್, ಮಂಗಳಾ ಪಿ ಉಪಾಧ್ಯ, ತಾರಾ, ಶ್ರೀಧರ ಮಯ್ಯ, ಎಡಬೆಟ್ಟು ಕೃಷ್ಣಮೂರ್ತಿ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಧಿಕ ಅಂಕಗಳಿಸಿ ಶೈಕ್ಷಣಿಕ ಸಾದನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಉಪಾಧ್ಯಕ್ಷರಾದ ಡಾ| ವಿಷ್ಣುಮೂರ್ತಿ ಐತಾಳ ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅರುಣ್ ಅಡಿಗ ನಿರ್ವಹಿಸಿದರು. ಮಂಜುನಾಥ ವಂದಿಸಿದರು.











