ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: “ಇಲ್ಲಿನ ಭಾಷಿ ಚಂದ, ಇಲ್ಲಿನ ಬದ್ಕ್ ಚಂದ. ಇಲ್ಲಿ ಇಪ್ಪುಕೆ, ಈ ಭಾಷಿ ಮಾತಾಡುಕೆ ಈ ಜನ್ಮ ಸಾಕಾತಿಲ್ಲ, ಅಭಿಮಾನ ಕಡಿಮೆ ಆತಿಲ್ಲ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಹೇಳಿದರು. ಅವರು ಕುಂದಾಪುರದ ಗಾಂಧೀ ಮೈದಾನದಲ್ಲಿ ಹಮ್ಮೊಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ, ಕರ್ನಾಟಕ ಎಂದರೆ ಬರೀ ಭಾಷೆಯಲ್ಲ, ಬರೀ ನೆಲವಲ್ಲ ಅದೊಂದು ಭಾವನಾತ್ಮಕ ಸಂಬಂಧ, ಬಂಗಾರದ ಬಯಲುನಾಡು, ನಿತ್ಯ ಹರಿದ್ವರ್ಣ, ಪಶ್ಚಿಮ ಘಟ್ಟಗಳ ಕರಾವಳಿಯನ್ನು ಹೊಂದಿರುವ ಮಲೆನಾಡು, ಮಹಾಸಾಗರದ ಹೆಬ್ಬಾಗಿಅನಂತಿರುವ ಕರುನಾಡು, ಇತಿಹಾಸ, ಆಚಾರ ವಿಚಾರ, ಸಂಸ್ಕೃತಿ ಪರಂಪರೆ, ವೈವಿಧ್ಯತೆ, ಭಾಷಾ ಸೊಗಡು, ವಿಶಿಷ್ಟತೆಗಳ ಮೂಲಕ ಹೆಸರಾಗಿದೆ. ಕರ್ನಾಟಕದ ಹೆಸರೇ ಒಂದು ಶಕ್ತಿ ಎಂದರೆ ಉತ್ತೇಕ್ಷೆಯಲ್ಲ. ಭಾಷಾವಾರು ಪ್ರಾಂತ್ಯಗಳ ರಚನೆ, ಏಕೀಕರಣ, ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ಮತ್ತು ಇದಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುವ, ಗೌರವಿಸುವ ಮಹತ್ವದ ದಿನವೂ ಇದಾಗಿದೆ. ಆಲೂರು ವೆಂಕಟರಾಯರಿಂದ, ಶಿವರಾಮ ಕಾರಂತರಿಂದ ಹಿಡಿದು ನೂರಾರು ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಚಿಂತಕರ ಕೊಡುಗೆಯ ಫಲವೇ ಈ ರಾಜ್ಯೋತ್ಸವ ಸಂಭ್ರಮ ಎಂದರು.
ನಮ್ಮ ನಾಡಿನ ವೈಶಿಷ್ಟ್ಯತೆಗೆ ಮತ್ತಷ್ಟು ಮೆರಗು ನೀಡಿರುವ ಕರಾವಳಿ ಪ್ರದೇಶ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ವಿಷಯ, ಕಾಡು ಕಡಲುದೈವ ದೇವರು ನಂಬಿಕೆ ಸಾಹಸಗಳ ಮಹಿಮೆಯನ್ನು ಬಣ್ಣಿಸಿದ ಕಾಂತಾರದ ದಂತಕಥೆಯ ನೆಲವಿದು. ಹಾಗೂ ಇತ್ತೀಚೆಗೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದ ಕಾಮನ್‌ವೆಲ್ತ್ ಪಂದ್ಯಾಟದಲ್ಲಿ ಸಾಧನೆಗೈದ ಗುರುರಾಜ್ ಪೂಜಾರಿ ಸೇರಿಂದತೆ ಹಲವು ಕ್ಷೇತ್ರಗಳಲ್ಲಿ ಈ ಪ್ರದೇಶ ಕರ್ನಾಟಕದ ಹಿರಿಮೆಯ ಮುಕುಟವಾಗಿದೆ. ಯಕ್ಷಗಾನದ ಮೂಲಕ ನುಡಿಸೇವೆ, ಸಾಟಿಯಿಲ್ಲದ ತಾಯ್ಕುಡಿ-ತಾಯ್ಕೆಲೆದ ಅಭಿಮಾನ ಈ ಪ್ರದೇಶದ ಮತ್ತೊಂದು ವಿಶೇಷತೆಯಾಗಿದೆ. ನಾಡು ನುಡಿಯ ಬಗೆಗಿನ ಅಭಿಮಾನದ ಜೊತೆಗೆ ಅಭಿವೃದ್ಧಿಯ ಹೆಜ್ಜೆಗಳನ್ನು ವೇಗಗೊಳಿಸುವ ಅಗತ್ಯತೆಯೂ ನಮ್ಮ ಮೇಅದೆ. ಭಾಷೆ ಹಾಗೂ ಬದುಕಿನ ಪ್ರಗತಿಗೆ ಒಗ್ಗಟ್ಟಿನ ಪ್ರಯತ್ನ ಅಗತ್ಯವಾಗಿದೆ. “ಸರ್ವೋದಯವಾಗಲಿ ಸರ್ವರಲಿ ” ಎನ್ನುವ ಕುವೆಂಪುರವರ ಆಶಯದಂತೆ ಈ ರಾಜ್ಯೋತ್ಸವ ಮತ್ತಷ್ಟು ಹೊಸತನ ತರಲಿ, ಯಶಸ್ಸು ತರಲಿ ಎಂದು ಕನ್ನಡಿಗರಿಗೆ ಶುಭ ಹಾರೈಸಿದರು.
ಡಿವೈಎಸ್‌ಪಿ ಶ್ರೀಕಾಂತ್, ಪುರಸಭೆ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಬಿ.ಇ.ಓ ಕಾಂತರಾಜ್ ಸಿ.ಎಸ್., ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ, ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಹಾಗೂ ಸದಸ್ಯರು, ಪೌರ ಕಾರ್ಮಿಕರು ಹಾಜರಿದ್ದರು. ವಿವಿಧ ಶಾಲಾ ಮಕ್ಕಳಿಂದ ಹಾಗೂ ಪೊಲೀಸರಿಂದ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಯಿತು.











