ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ಕುಂದಾಪುರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರಿಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಕುಂದಾಪುರದ ಹೋಟೆಲ್ ಶರೋನ್ ಸಭಾಂಗಣದಲ್ಲಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಹಕಾರ ಕ್ಷೇತ್ರ ವಿಫುಲವಾಗಿ ಬೆಳೆದಿದೆ. ಈ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವುದು ಸಹಕಾರ ಸಂಘಗಳ ನೌಕರರ ಜವಬ್ದಾರಿ. ಸಂಘದ ಸದಸ್ಯರು, ಸಾಲಗಾರರು, ಠೇವಣಿದಾರರಿಗೆ ತೃಪ್ತಿಯಾದರೆ ಸಂಘ ಬೆಳೆಯುತ್ತದೆ. ಹಾಗಾಗಿ ಮೂಲವನ್ನು ಸರಿಪಡಿಸುವ ಕೆಲಸ ನೌಕರರದ್ದು. ಏಕ ಮನಸ್ಸಿನಿಂದ ಸಹಕಾರ ಕ್ಷೇತ್ರದಲ್ಲಿ ದುಡಿಯಬೇಕು ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ, ಸಹಕಾರ ಸಂಘಗಳ ನೌಕರರಿಗೆ ಕಾಲಕಾಲಕ್ಕೆ ಸೂಕ್ತ ತರಬೇತಿಯ ಅವಶ್ಯಕತೆ ಇರುತ್ತದೆ. ವ್ಯಕ್ತಿತ್ವ ವಿಕಸನ ತರಬೇತಿ ವ್ಯವಹಾರದಲ್ಲಿ ಅನುಕೂಲವಾಗುತ್ತದೆ. ಸಹಕಾರಿ ನೌಕರರನ್ನು ಗುರುತಿಸುವ ಕಾರ್ಯವೂ ಶ್ಲಾಘನೀಯ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು, ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ ಪಿ.ಎಸ್, ಸಾಲಿಗ್ರಾಮದ ಶ್ರೀ ಗುರುನರಸಿಂಹ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಸೋಮಾಯಾಜಿ, ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಐತಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಳಿಕ ‘ದೈನಂದಿನ ವ್ಯವಹಾರದಲ್ಲಿ ಸಿಬ್ಬಂದಿಯವರ ಪಾತ್ರದ ಕುರಿತು ಶ್ರೀಧರ ಸೋಮಾಯಾಜಿ, ಹಾಗೂ ‘ಸಾಲ ವಸೂಲಾತಿಯಲ್ಲಿ ಸಿಬ್ಬಂದಿಯವರ ಪಾತ್ರ ಮತ್ತು ಮಾನವ ಸಂಪನ್ಮೂಲ ಅಭಿವೃದ್ದಿ ಕುರಿತು ಶ್ರೀಧರ ಪಿ.ಎಸ್ ಉಪನ್ಯಾಸ ನೀಡಿದರು.
ಕುಂದಾಪುರ ತಾ.ಪ್ರಾ.ಕೃ.ಪ.ಸ.ಸಂ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಐತಾಳ್ ಸ್ವಾಗತಿಸಿ, ಕಾರ್ಯದರ್ಶಿ ಕೀರ್ತಿಕುಮಾರ್ ವಂದಿಸಿದರು. ಅನುಷಾ ಕಾರ್ಯಕ್ರಮ ನಿರ್ವಹಿಸಿದರು.











