ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಹಕಾರ ರಂಗ ಭಾರೀ ಬದಲಾವಣೆಯ ಕಾಲಘಟ್ಟದಲ್ಲಿದ್ದು ಸರಕಾರವೂ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಅನಿವಾರ್ಯತೆ ಇದೆ ಎಂದು ಸಚಿವ ಎಸ್. ಅಂಗಾರ ಹೇಳಿದರು.
ಅವರು ರವಿವಾರ ಮಂದಾರ್ತಿ ಸೇವಾ ಸ. ಸಂಘದ ನೂತನ ಕಟ್ಟಡ ‘ಶ್ರೀ ದುರ್ಗಾ ಸಹಕಾರ ಸೌಧ’ದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.

ಸಹಕಾರ ಸಂಘಗಳು ಗ್ರಾಮೀಣ ಪ್ರದೇಶಗಳಲ್ಲಿ ರೈತಾಪಿ ವರ್ಗದವರಿಗೆ ಸುಲಭ ರೀತಿಯಲ್ಲಿ ನೆರವು ನೀಡಿದಾಗ ಸಂಸ್ಥೆಯ ಮೇಲೆ ವಿಶ್ವಾಸ ಬೆಳೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಆತನಿರ್ಭರ ಯೋಜನೆಯಂತೆ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಕಟ್ಟಡವನ್ನು ಉದ್ಘಾಟಿಸಿ, ಸಹಕಾರಿ ವ್ಯವಸ್ಥೆಯು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಮೀರಿ ಸೇವೆ, ಸೌಲಭ್ಯ ನೀಡುತ್ತಿವೆ. ಸ್ವ ಸಹಾಯ ಸಂಘಗಳ ಮಹಿಳಾ ಸದಸ್ಯರ ಸ್ವಾವಲಂಬನೆ, ಪ್ರಾಮಾಣಿಕ ಮರುಪಾವತಿ ಇನ್ನಷ್ಟು ಸದೃಢಗೊಳಿಸಿದೆ ಎಂದರು.
ಸಂಘವು ಜನರ ನಂಬಿಕೆ ಗಳಿಸಿ, ಉಳಿಸುವುದು ಮುಖ್ಯ. ಸದಸ್ಯರು ಪಡೆದ ಸಾಲವನ್ನು ಉತ್ಪಾದಕ ವಲಯಕ್ಕೆ ಬಳಸುವುದರಿಂದ ಸುಲಭ ಮರುಪಾವತಿ ಯೊಂದಿಗೆ ಸಂಸ್ಥೆಯೂ ಬೆಳೆಯುತ್ತದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೋರ ಎಚ್. ಧನಂಜಯ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಎಸ್‌ಸಿಡಿಸಿಸಿ ನಿರ್ದೇಶಕರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ರಾಜೇಶ್ ರಾವ್, ಅಶೋಕ್ ಕುಮಾರ್ ಶೆಟ್ಟಿಬೆಳ್ಳಂಪಳ್ಳಿ ರಾಜು ಪೂಜಾರಿ, ಮೊಳಹಳ್ಳಿ ಮಹೇಶ್ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಹೆಗ್ಗುಂಜೆ ಪಂಚಾಯತ್ ಅಧ್ಯಕ್ಷೆ ಶೋಭಾ ಬಿ. ಶೆಟ್ಟಿ, ಕಾಡೂರಿನ ಪಾಂಡುರಂಗ ಶೆಟ್ಟಿ, ಬಿಲ್ಲಾಡಿಯ ಕುಮಾರಿ ರತ್ನಾ , ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್., ಲೆಕ್ಕ ಪರಿಶೋಧನ ಉಪನಿರ್ದೇಶಕ ಗಣೇಶ್ ಮಯ್ಯ ಅತಿಥಿಗಳಾಗಿದ್ದರು.
ಪ್ರಧಾನ ಕಚೇರಿ, ಶಾಖಾ ಕಚೇರಿ, ಗೋದಾಮು, ಸಭಾಭವನ, ಭದ್ರತಾ ಕೊಠಡಿ, ಭದ್ರತಾ ಕೋಶ, ಸಭಾಭವನ, ಲಿಫ್ಟ್ ಇತ್ಯಾದಿ ಸೌಲಭ್ಯಗಳನ್ನು ಅತಿಥಿಗಳು ಉದ್ಘಾಟಿಸಿದರು. ನವೋದಯ ಗುಂಪು ಮತ್ತು ಜಂಟಿ ಬಾಧ್ಯತಾ ಗುಂಪು ಉದ್ಘಾಟನೆಗೊಂಡಿತು.
ಸಂಘದ ನಿರ್ದೇಶಕ ಶೇಡಿಕೊಡು ವಿಠಲ್ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಕೆ. ಶಂಭು ಶಂಕರ ರಾವ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.
6ರೂ.ಗಳಿಂದ 65 ಕೋಟಿ ರೂ.ಗೆ!
ಮಂದಾರ್ತಿ ಸೊಸೈಟಿ 1925ರಲ್ಲಿ 6 ರೂ. ಠೇವಣಿಯೊಂದಿಗೆ ಪ್ರಾರಂಭಗೊಂಡಿದ್ದು ಇಂದು 65 ಕೋಟಿ ರೂ. ಠೇವಣಿ ಹೊಂದಿದೆ. ಶತಮಾನದ ವರ್ಷದಲ್ಲಿ 100 ಕೋಟಿ ರೂ. ಗೆ ಏರುವಂತಾಗಲಿ ಎಂದು ರಾಜೇಂದ್ರ ಕುಮಾರ್ ಹಾರೈಸಿದರು. 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ದುರ್ಗಾ ಸಹಕಾರ ಸೌಧ ನಗರದ ಪ್ರತಿಷ್ಠಿತ ಕಂಪೆನಿಗಳ ಕಚೇರಿಯಂತಿದೆ. ಜಿಲ್ಲೆಯ ಸಹಕಾರಿ ಸಂಘಗಳಲ್ಲಿ ಅತ್ಯುತ್ತಮ ಕಟ್ಟಡವೆನಿಸಿದ್ದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.











