ಕುಂದಾಪುರ ಮಿರರ್ ಸುದ್ದಿ…
ಕೋಟ : ಸಾಮಾಜಿಕ ಸೇವೆಗೆ ಜನಸಾಮಾನ್ಯ ಹಾಗೂ ಸಂಘಸಂಸ್ಥೆಗಳ ಕೊಡುಗೆ ಬಹುಮುಖ್ಯವಾಗಿದೆ ಈ ದಿಸೆಯಲ್ಲಿ ಒಂದಿಷ್ಟು ನೆರವು ನೀಡಲು ಸಹಕಾರಿಯಾಗಿದೆ ಎಂದು ಉಡುಪಿಯ ಸಮಾಜಸೇವಕ ರವಿ ಕಟಪಾಡಿ ಹೇಳಿದ್ದಾರೆ.
ಶನಿವಾರ ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇವರು ಆಯೋಜಿಸಿದ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಸಂಘಸಂಸ್ಥೆಗಳು ದುಬಾರಿ ಕರ್ಚಿನ ಕಾರ್ಯಕ್ರಮ ಆಯೋಜಿಸುವ ಬದಲು ಅದೇ ಹಣವನ್ನು ಅನಾರೋಗ್ಯ ಪೀಡಿತರಿಗೆ ನೆರವು ನೀಡಲು ಬಳಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಒಂದು ಸನ್ಮಾನ ನಮ್ಮಂತವರನ್ನು ಬಹು ಎತ್ತರಕ್ಕೆ ಕೊಂಡ್ಯೊಯುವ ಜೊತೆಗೆ ಇನ್ನಷ್ಟು ಸಮಾಜಸೇವೆ ಮಾಡಲು ಪ್ರೇರೆಪಿಸುತ್ತದೆ, ಅಘೋರೇಶ್ವರ ಕಲಾರಂಗ ನೀಡಿದ ಗೌರವವನ್ನು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ .ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ ನನ್ನ ಪೋಷಕರು ಮತ್ತು ನನ್ನ ಗೆಳೆಯರು ಹಾಗೂ ನಿರಂತರ ಪ್ರಚಾರಕೊಟ್ಟವರು ಮಾಧ್ಯಮ ಮಿತ್ರರು ಆದ್ದರಿಂದ ಈ ಎಲ್ಲಾ ಸನ್ಮಾನವು ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಕಾರ್ತಟ್ಟು-ಚಿತ್ರಪಾಡಿ. ಶ್ರೀ ಅಘೋರೇಶ್ವರ ದೇವಸ್ಥಾನ ಆಡಳಿತ ಮೊಕ್ತೇಶ್ವರ ಚಂದ್ರಶೇಖರ ಕಾರಂತ ಉದ್ಘಾಟಿಸಿ ಮಾತನಾಡಿ ಸೆಂಟ್ರಿಂಗ್ ಕೆಲಸ ಮಾಡಿ ದಿನದ ಸಣ್ಣ ಸಂಭಾವನೆಯಿಂದ ದುಡಿಯುವ ಯುವಕ ರವಿ ಕಟಪಾಡಿಯವರು ವರ್ಷಕ್ಕೊಮ್ಮೆ ಕೃಷ್ಣ ಅಷ್ಟಮಿಗೆ ವೇಷ ಹಾಕಿ ಅದರಲ್ಲಿ ಬರುವ ಲಕ್ಷಾಂತರ ರೂ. ಸಂಭಾವನೆಯನ್ನು ಅಶಕ್ತ ಅನಾರೋಗ್ಯ ಮಕ್ಕಳಿಗೆ ಮುಡಿಪಾಗಿಟ್ಟಿರುವುದು ಪ್ರಶಂಸನೀಯ. ಇವರ ನಿಸ್ವಾರ್ಥ ಸೇವೆಗೆ ಜನಸಾಮಾನ್ಯರು ಸಾಥ್ ನೀಡಿದ್ದಾರೆ ಇಂಥಹ ವ್ಯಕ್ತಿಗಳಿಗೆ ಇನ್ನಷ್ಟು ಸೇವೆ ಮಾಡಲು ಅನುಗ್ರಹಿಸಲಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಇದರ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ ವಹಿಸಿದ್ದರು.
ಕುಂದಾಪುರ ತಾಲೂಕು ಗಮಕ ಪರಿಷತ್ ಅಧ್ಯಕ್ಷ ಹೆಚ್ ಸುಜಯೀಂದ್ರ ಹಂದೆ ಸಮಾಜಸೇವಕ ರವಿ ಕಟಪಾಡಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ನಾಯರಿ, ರೋಟರಿ ಕ್ಲಬ್ ಕೋಟ ಸಿಟಿ ಇದರ ಅಧ್ಯಕ್ಷ ಶಿವಾನಂದ ನಾಯರಿ, ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಇದರ ಸ್ಥಾಪಕಾಧ್ಯಕ್ಷ ಉಮೇಶ ನಾಯರಿ ಉಪಸ್ಥಿತರಿದ್ದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರಭಾಕರ ನ್ಯಾರಿ ಸ್ವಾಗತಿಸಿದರು. ಶ್ರೀ ಅಘೋರೇಶ್ವರ ಕಲಾರಂಗ ಉಪಾಧ್ಯಕ್ಷ ಶ್ಯಾಮಸುಂದರ ನ್ಯಾರಿ ಕಾರ್ಯಕ್ರಮವನ್ನು ನಿರೂಪಿಸಿ,ಕಾರ್ಯದರ್ಶಿ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ವಂದಿಸಿದರು.











