ಕುಂದಾಪುರ ಮಿರರ್ ಸುದ್ದಿ…
ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ನೆನಪು ಮೂವೀಸ್ ಕೋಟ, ಡಾ. ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ ಅವರ ನಿರ್ಮಾಣದ ನರೇಂದ್ರ ಕುಮಾರ್ ನಿರ್ದೇಶನದ ಶಿಕ್ಷಣದ ಹೊಸ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲುವ ರಾಷ್ಟ್ರೀಯ ನೀತಿ ಆಧಾರಿತ, ಮಕ್ಕಳ ಕಿರುಚಿತ್ರ ಬಾಲು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಬಿಡುಗಡೆಗೊಂಡಿತು.
ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಚಿತ್ರನಟ ರಘು ಪಾಂಡೇಶ್ವರ್ ಅವರು ಪ್ರತಿಯೊಂದು ಮಕ್ಕಳಲ್ಲೂ ತನ್ನದೇ ಆದ ವಿಶೇಷ ಪ್ರತಿಭೆ ಅಡಗಿರುತ್ತದೆ, ಸಮಯ ಹಾಗೂ ಸಮರ್ಥ ಮಾರ್ಗದರ್ಶಕರು ಸಿಕ್ಕಿದಾಗ ಆ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ, ಕಿರುಚಿತ್ರಗಳೇ ಚಲನಚಿತ್ರಗಳಿಗೆ ಅಡಿಪಾಯ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರನಟ ಪ್ರಭಾಕರ್ ಕುಂದರ್ ಕಿರುಚಿತ್ರಗಳು ಕಲಾವಿದರನ್ನು ಸೃಷ್ಟಿ ಮಾಡುವ ವೇದಿಕೆಯಾಗಿದ್ದು, ರಂಗಭೂಮಿ ಕಲಾವಿದರ ನೈಜ ಪ್ರತಿಭೆಗೆ ಬೆಳಕು ಚೆಲ್ಲಲು ಕಿರುಚಿತ್ರಗಳು ದಾರಿದೀಪವಾಗುತ್ತಿದೆ ಎಂದರು. ಬಾಲು ಕಿರುಚಿತ್ರ ನಿರ್ದೇಶಕ ನರೇಂದ್ರ ಕುಮಾರ್ ದಂಪತಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಸಿ.ಪಿ.ಆರ್ ಕಾರ್ಕಡ ಸವಿತಾ, ಉಡುಪಿ ಜಿಲ್ಲೆ ಸ.ವಿ. ವೇದಿಕೆ ಅಧ್ಯಕ್ಷ ಉದಯ ಕುಮಾರ್ ಹೈಕಾಡಿ, ಬ್ರಹ್ಮಾವರ ತಾಲೂಕು ಸ.ವಿ ವೇದಿಕೆ ಅಧ್ಯಕ್ಷ ನಟರಾಜ್, ಉದ್ಯಮಿ ಸೂರ ಪೂಜಾರಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಾಹಿತಿ ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.











