ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರಮಹೋತ್ಸವ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಹಕಾರಿ ಸಂಘಗಳು ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಿದಾಗ ಸಹಕಾರಿ ಉದ್ಧೇಶ ಈಡೇರುತ್ತದೆ ಎಂದು ಮಾಜಿ ಶಾಸಕ, ಧಾರ್ಮಿಕ ಮುಂದಾಳು, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಮಾಜಿ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಶನಿವಾರ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರಮಹೋತ್ಸವವನ್ನು ಸಂಘದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ, ಮಾತನಾಡಿದರು.
ಅಜಾತಶತ್ರು ದಿ| ಯಡ್ತರೆ ಮಂಜಯ್ಯ ಶೆಟ್ಟಿ ಅವರ ಮುಂದಾಳತ್ವದಲ್ಲಿ ೧೯೬೦ ರಲ್ಲಿ ಷೇರು ಸಂಗ್ರಹದ ಮೂಲಕ ಆರಂಭಗೊಂಡ ಈ ಸಂಸ್ಥೆಯು ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ರೈತರ ಹಿತದೃಷ್ಟಿಯಲ್ಲಿ ಆರಂಭಗೊಂಡ ಈ ಸಂಸ್ಥೆಯ ಯಶಸ್ಸಿನಲ್ಲಿ ಉತ್ತಮ ಆಡಳಿತ ಮಂಡಳಿ, ಪ್ರಾಮಾಣಿಕ ನೌಕರ ವೃಂದ ಹಾಗೂ ಗ್ರಾಹಕರ ಸಹಕಾರದ ಪಾಲು ಹಿರಿದು ಎಂದರು.

ಸಹಕಾರಿ ಎಂದರೆ ಒಬ್ಬರಿಗೊಬ್ಬರು ಸಹಕಾರ ನೀಡುವುದು, ಅದೇ ಸಿದ್ಧಾಂತವನ್ನು ಎಲ್ಲರೂ ಪಾಲಿಸುತ್ತಿರುವುದರಿಂದಲೇ ಈ ರಂಗ ಬೆಳೆಯುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.
6 ದಶಕದ ಹಿಂದಿನ ಈ ಸಂಸ್ಥೆಯು ಇಂದು ಬೃಹದಾಕಾರವಾಗಿ ಬೆಳೆದಿದೆ. ವಾರ್ಷಿಕ 15 ಕೋ.ರೂ. ಗೂ ಮಿಕ್ಕಿ ವ್ಯವಹಾರವನ್ನು ಹೊಂದಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ರಂಗ ಉತ್ತಮವಾಗಿರಲು ಗ್ರಾಹಕರು ತಮ್ಮ ಮೇಲಿಟ್ಟ ನಂಬಿಕೆ ಹಾಗೂ ವಿಶ್ವಾಸವೇ ಕಾರಣ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು, ನಿವೃತ್ತ ನೌಕರರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮಿನಾರಾಯಣ ಜಿ.ಎನ್., ಕುಂದಾಪುರದ ಸಹಾಯಕ ನಿಬಂಧಕಿ ಲಾವಣ್ಯ ಕೆ.ಆರ್., ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಬಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಽಕಾರಿ ಎಚ್. ಶೋಭಾಕೃಷ್ಣ, ನಿರ್ದೇಶಕರಾದ ಮೋಹನ್ದಾಸ್ ಶೆಟ್ಟಿ, ಕೆ. ಸುಧಾಕರ ಶೆಟ್ಟಿ, ಆನಂದ ಬಿಲ್ಲವ, ಎಂ. ಮಹೇಶ ಹೆಗ್ಡೆ ಮೊಳಹಳ್ಳಿ, ಕೆ. ಭುಜಂಗ ಶೆಟ್ಟಿ, ಕೆ. ಮೋಹನ್ ಪೂಜಾರಿ, ಪ್ರಭಾಕರ ಶೆಟ್ಟಿ, ರವಿ ಗಾಣಿಗ, ಎಚ್. ದೀನಪಾಲ್ ಶೆಟ್ಟಿ, ಎಚ್. ಚಂದ್ರಶೇಖರ ಶೆಟ್ಟಿ, ಎಸ್.ಜಯರಾಮ ಶೆಟ್ಟಿ, ಯಡ್ತರೆ ಹೌಸ್ನ ಎಂ,. ಅಶೋಕ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಎಸ್. ರಾಜು ಪೂಜಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಆರ್.ಜೆ. ನಯನಾ, ಜಯಶ್ರೀ ಕಾಮತ್ ಕಾರ್ಯಕ್ರಮ ನಿರೂಪಿಸಿದರು.








