ಕುಂದಾಪುರ ಮಿರರ್ ಸುದ್ದಿ…
ಕೋಟ :ಸಮಾಜದಲ್ಲಿ ಕೆಲಸ ಮಾಡುವ ಸಂದರ್ಭ ಬಡಜನರ ಸಮಸ್ಯೆಗೆ ಅನ್ಯಾಯವಾಗದಂತೆ, ನಿಜವಾದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ದುರ್ಬಲರಿಗೆ ಅವಕಾಶವಾಗುವಂತೆ ಎಚ್ಚರ ವಹಿಸಿದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಾಲಿಗ್ರಾಮದ ಕಾರಂತ ಬೀದಿಯಲ್ಲಿ ಭಾನುವಾರ ಅವರು ಜನಸೇವಾ ಕೇಂದ್ರ, ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ, ಹಿಂದೂಸ್ಥಾನಿ ಸೇವಾ ಫೌಂಡೇಶನ್ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 6ಲಕ್ಷ ಹೆಕ್ಟೇರ್‍ಗೂ ಮಿಕ್ಕಿ ಡೀಮ್ಡ್ ಫಾರೆಸ್ಟ್ ಇದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಚರ್ಚಿಸಿ ಕೋರ್ಟ್ ಮೂಲಕ ಇದನ್ನು ಕಂದಾಯ ಇಲಾಖೆಯ ಸುಪುರ್ದಿಗೆ ತರಲು ಕ್ರಮ ತೆಗೆದುಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 34ಸಾವಿರ ಹೆಕ್ಟೇರ್ ಭುಮಿಯನ್ನು ಡೀಮ್ಡ್‍ನಿಂದ ಹೊರತಂದು ಬಡವರಿಗೆ ನಿವೇಶನ ನೀಡಲು ಎಲ್ಲ ತಯಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಟದ ಗೀತಾನಂದ ಫೌಂಡೇಶನ್‍ನ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ ಗ್ರಾಮೀಣ ಪರಿಸರದ ಜನತೆಗೆ ಕಾನೂನಿನ ಪ್ರಜ್ಞೆ ಇಲ್ಲದೇ ಇರುವುದರಿಂದ ಅವರಿಗೆ ನ್ಯಾಯ ಒದಗಿಸಲು ಜನಸೇವಾ ಕೇಂದ್ರಗಳು ಪ್ರಯತ್ನಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ ಗಾಣಿಗ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಹಿಂದೂಸ್ಥಾನಿ ಸೇವಾ ಫೌಂಡೇಶನ್ ಉದ್ಘಾಟಿಸಿದರು. ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಶುಭ ಹಾರೈಸಿದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯೆ ರತ್ನಾ ನಾಗರಾಜ ಗಾಣಿಗ, ಬಾರ್ಕೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ, ಹಿಂದೂಸ್ಥಾನಿ ಸೇವಾ ಫೌಂಡೇಶನ್ ಟ್ರಸ್ಟಿ ಶಾರದಾ ದಿನೇಶ್ ಗಾಣಿಗ, ಚೇತನಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ಇದ್ದರು.
ನಾಗರಾಜ ಗಾಣಿಗ ಸ್ವಾಗತಿಸಿದರು. ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











