ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ವಿಧಾನಪರಿಷತ್ ಮಾಜೀ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿಯವರ ರಾಜೀನಾಮೆ ಉಡುಪಿ ಜಿಲ್ಲಾ ಕಾಂಗ್ರೆಸ್ನಲ್ಲಿ ತಳಮಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ.
4 ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, 3 ಬಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಸಭಾಪತಿಯಾಗಿ ಸೇವೆ ಸಲ್ಲಿಸಿರುವ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ದುಃಖ ತಂದಿರುವುದಾಗಿ ತಿಳಿಸಿದ್ದಾರೆ. ಕೆ ಪ್ರತಾಪಚಂದ್ರ ಶೆಟ್ಟಿಯವರು ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನಲೆಯಲ್ಲಿ ಮತ್ತು ಪಕ್ಷದಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಅವರು ನೀಡಿರುವ ರಾಜೀನಾಮೆಯು , ಅವರ ನಾಯಕತ್ವದಲ್ಲಿ ಕಳೆದ 30 ವರ್ಷಗಳಿಂದ ಇರುವ ನನಗೆ ವೈಯಕ್ತಿಕವಾಗಿ ನೋವನ್ನುಂಟು ಮಾಡಿದೆ. ಪಕ್ಷದ ಹಿತದೃಷ್ಟಿ ಮತ್ತು ಚುನಾವಣಾ ದೃಷ್ಟಿಯಿಂದ ಇವರ ರಾಜೀನಾಮೆಯು ಉಡುಪಿಯ ಜಿಲ್ಲೆಯಲ್ಲಿ ಬಹಳಷ್ಟು ಪರಿಣಾಮ ಬೀರಲಿದೆ ಎಂದಿದ್ದಾರೆ.
ಜಿಲ್ಲೆಯ ಜ್ವಲಂತ ಸಮಸ್ಯೆಗಳ ಹೋರಾಟಕ್ಕೆ ಯಾವುದೇ ಮುಲಾಜಿಲ್ಲದೇ ಹೋರಾಟ ಮಾಡುವ ವ್ಯಕ್ತಿತ್ವ ಹೊಂದಿರುವುದರಿಂಧ ಜಿಲ್ಲೆಯಲ್ಲಿ ಜನಪ್ರಿಯ ಕಾಂಗ್ರೆಸ್ ನಾಯಕರಾಗಿರುವ ಕೆ. ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆಯನ್ನು ಅಂಗೀಕರಿಸುವ ಮೊದಲು ಪರಿಶೀಲನೆ ನಡೆಸುವಂತೆ ಕೋರಿದ್ದಾರೆ.











