ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಪ್ರಾಚೀನ ದೇವಾಲಯ ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕನಸಾಲು ರಸ್ತೆಯ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜ. 26 ರಿಂದ 28ರ ತನಕ ನಡೆಯಲಿದೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಬೆಟ್ಟಿನ್ ತಿಳಿಸಿದರು.
ಅವರು ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳಿಂದ ಈ ಪ್ರದೇಶದಲ್ಲಿ ದೈವೀ ಶಕ್ತಿ ಇತ್ತು ಎಂದು ಹೇಳಲಾಗುತ್ತಿದ್ದರೂ, ಮೈಲಾರ ಸ್ವಾಮೀಜಿ ಎಂದೇ ಕರೆಯಲ್ಪಟ್ಟ ಸನ್ಯಾಸಿಯೊಬ್ಬರು, ಪ್ರಯಾಣದ ನಡುವೆ ಇಲ್ಲಿನ ಛತ್ರದಲ್ಲಿ ಆಶ್ರಯ ಪಡೆದಿದ್ದು, ಮರಳಿ ಹೋಗುವಾಗ ಆಶ್ರಯ ನೀಡಿದ ಮಹಿಳೆಗೆ ತನ್ನಲ್ಲಿದ್ದ ಅಪೂರ್ವ ಲಿಂಗ ಒಪ್ಪಿಸಿ, ಪೂಜೆ ಸಲ್ಲಿಸುತ್ತಾ ಇರುವಂತೆ ತಿಳಿಸಿದರು. ಆ ಮಹಿಳೆ ಪರಿಸರದವರ ಸಹಕಾರದಿಂದ ಪೂಜಾ ವ್ಯವಸ್ಥೆ ಮಾಡುತ್ತಾ ಬಂದಿದ್ದು ನಂತರ ಭಕ್ತರ ಸಹಕಾರದಿಂದ ಬೆಳೆದು, ಮೈಲಾರ ಮಠ ಎಂದು ಕರೆಯಲ್ಪಟ್ಟಿತು. ನಂತರ ದಾರ್ಶನಿಕರ ಮಾರ್ಗದರ್ಶನದಲ್ಲಿ ಶ್ರೀ ಮೈಲಾರೇಶ್ವರ ದೇವಸ್ಥಾನವಾಯಿತು ಎಂದು ದಾಖಲೆಗಳು ತಿಳಿಸುತ್ತವೆ.
ದೇವಸ್ಥಾನ ನೋಡಿಕೊಂಡು ಬರುತ್ತಿದ್ದ ಕುಟುಂಬದವರು ದೇವಾಲಯದ ಉಸ್ತುವಾರಿಯನ್ನು ಶಿಕ್ಷಕರಾದ ಶೇಷಗಿರಿ ಹೆಬ್ಬಾರ ಎಂಬುವರಿಗೆ ಒಪ್ಪಿಸಿ ಅವರು ಸ್ಥಳೀಯ ಯುವಕರು, ಭಕ್ತಾಧಿಗಳ ಸಹಾಯದಿಂದ ದೇವಾಲಯ ನಿರ್ವಹಿಸುತ್ತಿದ್ದರು. 1988ರ ನಂತರ ಹೊಸ ಆಡಳಿತ ಮಂಡಳಿ ಆಯ್ಕೆಗೊಂಡು ವರ್ಷದಿಂದ ವರ್ಷಕ್ಕೆ ದೇವಾಲಯ ಅಭಿವೃದ್ಧಿ ಹೊಂದಿತು. 1992ರಲ್ಲಿ ಅಷ್ಟಬಂಧ ಪ್ರಶ್ನೆಯಲ್ಲಿ ಪ್ರಸ್ತಾಪನೆಗೊಂಡಂತೆ ದೇವಾಲಯದಲ್ಲಿ ಪರಿವಾರ ದೇವರುಗಳ ಪ್ರತಿಷ್ಠೆ, ಅಗತ್ಯ ಸೌಲಭ್ಯಗಳ ವ್ಯವಸ್ಥೆಗಾಗಿ ಜೀರ್ಣೋದ್ಧಾರ ಸಮಿತಿ ರಚನೆಗೊಂಡು 1995ರಲ್ಲಿ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ದೇವಾಲಯವನ್ನು ಸಕಲ ವ್ಯವಸ್ಥೆಗಳೊಂದಿಗೆ ಅಭಿವೃದ್ಧಿ ಪಡಿಸಲಾಯಿತು. ಯು. ಡಿ. ಆರ್. ಮಯ್ಯ, ರಿಕಾರ್ಡ ವೆಂಕಟರಮಣ, ಡಾ. ಎಂ. ವಿ. ಕುಲಾಲ್, ಡಿ. ಕೆ. ಅಣ್ಣಪ್ಪಯ್ಯ ಆಡಳಿತ ಮೊಕ್ತ್ತೇಸರರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಕೆ. ರಮೇಶ ಬಿಲ್ಲವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಸುಮಾರು 28 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ಗರ್ಭಗುಡಿಗೆ ಸುಮಾರು 5.5 ಲಕ್ಷ ವೆಚ್ಚದಲ್ಲಿ ತಾಮ್ರದ ಹೊದಿಕೆ ಮಾಡಲಾಗಿದೆ ಎಂದು ಅಶೋಕ್ ಬೆಟ್ಟಿನ್ ತಿಳಿಸಿದರು.
ಜ. 26ರಿಂದ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳುತ್ತಿದ್ದು, 27 ರಂದು ಬೆಳಿಗ್ಗೆ ಶ್ರೀ ಮೈಲಾರೇಶ್ವರ ಹಾಗೂ ಪರಿವಾರ ದೇವರುಗಳ ಅಷ್ಠಬಂಧ ಪ್ರತಿಷ್ಠೆ ನಡೆಯಲಿದೆ. ಸಂಜೆ 7 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜ. 28ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಹಾಗೂ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪ್ರತಿದಿನ ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ ರಾತ್ರಿ 9ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ.27ರಂದು ಉಡುಪಿಯ ಭಾರ್ಗವಿ ಆರ್ಟ್ಸ್ ಮತ್ತು ಡ್ಯಾನ್ಸ್ ಅಕಾಡೆಮಿಯಿಂದ “ಭಾವ, ಯೋಗ, ಗಾನ ನೃತ್ಯ, 28 ರಂದು ಪುತ್ತೂರು ಜಗದೀಶ ಆಚಾರ್ಯ ಬಳಗದವರಿಂದ “ಸಂಗೀತ ಗಾನ ಸಂಭ್ರಮ” ನಡೆಯಲಿದೆ.
ಕಾರ್ಯಕ್ರಮದ ಯಶಸ್ಸಿಗೆ 20 ವಿವಿಧ ಸಮಿತಿಗಳನ್ನು ರಚಿಸಿಲಾಗಿದೆ. ಜ.25ರಂದು ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಜ.28ರಂದು ನಡೆಯುವ ಮಹಾ ಅನ್ನಸಂತರ್ಪಣೆಯಲ್ಲಿ 10-15ಸಾವಿರ ಮಂದಿ ಭಕ್ತರು ಭಾಗವಹಿಸಲಿದ್ದಾರೆ. ವಾಹನ ನಿಲುಗಡೆಗೆ ಚಿಕ್ಕನಸಾಲು ರಸ್ತೆಯ ಮೊಗವೀರ ಭವನದ ತಳ ಅಂತಸ್ತು ಹಾಗೂ ಪ್ರಥಮ ಮಹಡಿಯಲ್ಲಿ 300 ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಜ.28ರಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವುದರಿಂದ ಪೂರ್ವಾಹ್ನ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯ ತನಕ ಈ ರಸ್ತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದರು.
ಸುದ್ಧಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಮೇಶ ಬಿಲ್ಲವ, ಕಾರ್ಯದರ್ಶಿ ಅರುಣ್, ಮಾಜಿ ಕಾರ್ಯದರ್ಶಿ ಗಣೇಶ, ಪ್ರಚಾರ ಸಮಿತಿಯ ನಾಗರಾಜ ರಾಯಪ್ಪನಮಠ ಉಪಸ್ಥಿತರಿದ್ದರು.











