ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷದ ನಾಯಕರು ನನ್ನನ್ನು ನಡೆಸಿಕೊಂಡ ರೀತಿ ಸರಿಯಲ್ಲ ಎನ್ನುವ ಬೇಸರವಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಟಿ ಯಲ್ಲಿ ಅವರು ಮಾತನಾಡುತ್ತಾ ತನ್ನ ಅಭಿಪ್ರಾಯ ಹೇಳಿದರು. ನನಗೆ ಟಿಕೆಟ್ ನೀಡದೆ ಇರುವುದಕ್ಕೆ ಬೇಸರವಿಲ್ಲ. ನನಗೆ ನನ್ನ ಕೆಲಸದ ಬಗ್ಗೆ ತೃಪ್ತಿಯಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರ ಜೊತೆ ಚರ್ಚಿಸಿ ನಿಲುವು ಪ್ರಕಟಿಸುತ್ತೇನೆ ಎಂದರು.
5 ವರ್ಷ ಜನಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. 2013 ರಲ್ಲಿ 15 ದಿನಗಳ ಹಿಂದೆಯಷ್ಟೇ ಟಿಕೆಟ್ ನೀಡಿದ್ದರೂ ಹೋರಾಡಿ ಸೋತಿದ್ದೆ. ಬಳಿಕ 5 ವರ್ಷ ಕ್ಷೇತ್ರದಾದ್ಯಂತ ಓಡಾಟ ಮಾಡಿ, ಪಕ್ಷ ಸಂಘಟಿಸುವ ಮೂಲಕ ಲೋಕಸಭೆ, ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಗಳಲ್ಲಿ ಪಕ್ಷದ ಹೆಚ್ಚಿನ ಬೆಂಬಲಿತರು ಗೆಲ್ಲುವಲ್ಲಿ ಶ್ರಮಿಸಿದ್ದೇನೆ ಎಂದು ನೆನಪಿಸಿಕೊಂಡರು.
ಎರಡು ಬಾರಿ ಬೃಹತ್ ಸಮಾವೇಶ ಮಾಡಿಸುವ ಮೂಲಕ ನನ್ನನ್ನು ಬಳಸಿಕೊಂಡರು. ಆದರೆ ನನಗೆ ಟಿಕೆಟ್ ಇಲ್ಲ ಎನ್ನುವುದನ್ನು ಮೊದಲೇ ತಿಳಿಸಿದ್ದರೆ ಪಕ್ಷದ ನಾಯಕರ ಮೇಲೆ ಗೌರವ ಹೆಚ್ಚುತ್ತಿತ್ತು ಎಂದ ಅವರು, ಕುಮಾರ ಸ್ವಾಮಿ ಕರೆ ಮಾಡಿ ಬನ್ನಿ ಎಂದರು. ಆದರೆ ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದ ಅವರು, ಬಿಎಸ್‌ವೈ ಹಾಗೂ ಸಿಎಂ ಬೊಮ್ಮಾಯಿ ಕರೆ ಮಾಡಿ, ನಾವು ನಿಮ್ಮೊಂದಿಗಿದ್ದೇವೆ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ತಿಳಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ವಿರೋಧವನ್ನೂ ಮಾಡುವುದಿಲ್ಲ. ಶುಭಹಾರೈಸುವೆ ಎಂದಿದ್ದಾರೆ.
ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಹಾಲಿ ಶಾಸಕ ಸುಕುಮಾರ್ ಶೆಟ್ಟರಿಗೆ ಟಿಕೆಟ್ ಕೊಡಬೇಕು ಎನ್ನುವ ಅಭಿಪ್ರಾಯ ಕ್ಷೇತ್ರದಾದ್ಯಂತ ಇತ್ತು. ಗೆಲ್ಲುವ ವಿಶ್ವಾಸವೂ ಇತ್ತು. ಮತ್ತೊಂದು ಬಾರಿಗೆ ಶಾಸಕರಾಗುವ ಭಾವನೆ ಕಾರ್ಯಕರ್ತರದ್ದಾಗಿತ್ತು. ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಿದೆಯೋ, ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡೋಣ. ನಾವೆಲ್ಲರೂ ಸುಕುಮಾರ್ ಶೆಟ್ಟರೊಂದಿಗೆ ಇದ್ದೇವೆ ಎಂದರು.
ಪಕ್ಷದ ಪ್ರಮುಖರಾದ ಪ್ರಿಯದರ್ಶಿನಿ ದೇವಾಡಿಗ, ಪ್ರಕಾಶ್ ಪೂಜಾರಿ ಜೆಡ್ಡು, ಹರ್ಕೂರು ಮಂಜಯ್ಯ ಶೆಟ್ಟಿ, ಆನಂದ ಖಾರ್ವಿ ಉಪ್ಪುಂದ, ಪತ್ರಿಕಾಗೋಷ್ಠಿಯಲ್ಲಿದ್ದರು.











