Video:
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನಾನು ದೊಡ್ಡ ರಾಜಕಾರಣಿಯಲ್ಲ. ನನಗೆ ವೇಷ ಹಾಕಲು ಬರುವುದಿಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಕೋಟೇಶ್ವರದ ಸರಸ್ವತಿ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿದರು.
ನನ್ನ ಇಚ್ಚಾಶಕ್ತಿ ಸ್ಪಷ್ಟವಾಗಿದೆ. ನಾನು ಒಮ್ಮೆ ತೀರ್ಮಾನಿಸಿದರೆ ಅದನ್ನೇ ಪಾಲಿಸುವವ. ಕಲಾವಿದನಂತೆ ರಾಜಕೀಯ ಮಾಡಿ ಗೊತ್ತಿಲ್ಲ. ನಾನು ವಿಧಾನಸಭೆಗೆ ಪ್ರವೇಶಪಡೆಯಲು ನನಗಿಂತ ನೂರು ಪಟ್ಟು ನನ್ನ ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ನಿಮ್ಮ ಋಣ ತೀರಿಸಲು ಇನ್ನೊಂದು ಜನ್ಮ ಪಡೆಯಬೇಕೇನೋ. ನೀವು ನನ್ನ ಮೇಲಿಟ್ಟ ನಂಬಿಕೆಗಳಿಗೆ ನಾನು ಋಣಿಯಾಗಿದ್ದೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ನನಗೆ ವಯಸ್ಸಾಗಿದೆ ಎಂದು ಸಭೆಯೊಂದರಲ್ಲಿ ಹೇಳಿದ್ದನ್ನು ಕೇಳಿದೆ. ಚುನಾವಣೆ ಎನ್ನುವುದು ಎರಡು ತಂಡಗಳ ನಡುವಿನ ಧರ್ಮ ಯುದ್ಧವಾಗಬೇಕೇ ಹೊರತು ಹೊಲಸು ರಾಜಕೀಯವಾಗಬಾರದು. ನನ್ನ ವರಸ್ಸಿನ ಜಾತಕ ಅವರ ಬಳಿ ಇರಬಹುದು ಆದರೆ ನನಗೆ ಯಾವುದರಲ್ಲಿ ವಯಸ್ಸಾಗಿದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ನನಗೆ ನಡೆಯಲಾಗುವುದಿಲ್ಲವೇ? ನನ್ನ ಮೆದುಳು ನಿಷ್ಕ್ರಿಯವಾಗಿದೆಯೇ? ಅಥವಾ ಹಾಸಿಗೆ ಹಿಡಿದ್ದೇನೆಯೇ? ಗೆಲುವಿಗಾಗಿ ಕೆಳಮಟ್ಟದ ಮಾತುಗಳನ್ನಾಡುವುದು ಶೋಭೆ ತರುವುದಿಲ್ಲ ಎಂದರು. ಇನ್ನೂ ಮುಂದಕ್ಕೆ ಹೋಗಿರುವ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಗೆ ನಿಲ್ಲಲು ಶ್ರೀನಿವಾಸ ಶೆಟ್ಟಿಯೇ ಹೇಳಿದ್ದು ಎನ್ನುವ ಮಾತುಗಳನ್ನು ಮತದಾರರ ಬಳಿ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ಸಿಗೆ ನಾಚಿಕೆಗೇಡಿನ ಪರಿಸ್ಥಿತಿ. ನಾನು ನಂಬಿದ ಕಾರ್ಯಕರ್ತರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ ಎಂದ ಅವರು, ನನ್ನ ತಲೆಗೆ ಗುಂಡಿಟ್ಟರೂ ನನ್ನ ಬದ್ದತೆ ಬಿಜೆಪಿಯೇ ಎಂದು ಕಾಂಗ್ರೆಸ್ ಅಭ್ಯರ್ಥಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯವನ್ನು ಒಪ್ಪಿಕೊಂಡು ಕೆಲಸ ಮಾಡಿದ್ದೇನೆ. ಜಾತ್ಯಾತೀತವಾಗಿ ನನ್ನನ್ನು ಮತದಾರರು ಆಯ್ಕೆಮಾಡಿದ್ದಾರೆ ಎಂದ ಅವರು ನಾವು ನಿಮಗೆ ಗ್ಯಾರೆಂಟಿ ಕಾರ್ಡ್ ನೀಡುವುದಿಲ್ಲ. ನಿಮಗೆ ನಾನೇ ಗ್ಯಾರೆಂಟಿ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಹುಲ್ ಗಾಂಧೀ ಭಾರತ್ ಜೋಡೋ ಯಾತ್ರೆ ಮಾಡಿದರು. ನೀವು ಕಾಂಗ್ರೆಸ್ ನವರಿಗೆ ಕೇಳಿ ಭಾರತವನ್ನು ಒಡೆದದ್ದು ಯಾರು? ಜಮ್ಮು ಕಾಶ್ಮೀರದಲ್ಲಿ ರಾಹುಲ್ ಗೆ ಉಗ್ರಗಾಮಿಗಳು ಏನೂ ಮಾಡಿಲ್ಲ ಎಂದು ರಾಹುಲ್ ಹೇಳಿಕೆ ಪ್ರಸ್ತಾಪಿಸಿ, ಮನುಷ್ಯರಲ್ಲಿ ಸಂಬಂಧಿಕರಿಗೆ ಸಂಬಂಧಿಕರು ಏನೂ ಮಾಡುವುದಿಲ್ಲ ಎಂದು ಚಾಟಿ ಬೀಸಿದರು.
ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕಳೆದ ನಲ್ವತ್ತು ವರ್ಷಗಳಿಂದ ನಿಮ್ಮ ಮಧ್ಯೆ ಬೆಳಿದಿದ್ಧೇನೆ. ಮುಂದೆಯೂ ನಿಮ್ಮ ಜೊತೆ ಇರುತ್ತೇನೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು. ಇದೇ ಸಂದರ್ಭ 17 ಮಂದಿಗೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಕುಂದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ್ ಬೀಜಾಡಿ ಸ್ವಾಗತಿಸಿ, ಸತೀಶ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಪ್ರಾಸ್ತಾವಿಕ ಮಾತನಾಡಿದರು.










