ಬೈಂದೂರಲ್ಲಿ ಕೆ. ಗೋಪಾಲ ಪೂಜಾರಿ ಶಕ್ತಿ ಪ್ರದರ್ಶನ
ಕುಂದಾಪುರ ಮಿರರ್ ಸುದ್ದಿ…


ಬೈಂದೂರು : ಭಯೋತ್ಪಾದಕರ ದಾಳಿಯಿಂದ ಪ್ರಾಣ ತ್ಯಾಗ ಮಾಡಿದವರು ಕಾಂಗ್ರೆಸ್ ನಾಯಕರುಗಳು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷದ ಮೇಲೆ ಅಪವಾದ ಮಾಡಲಾಗುತ್ತದೆ. ಬಿಜೆಪಿಗೆ ಭಯೋತ್ಪಾದನೆಯ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಬೈಂದೂರಿನಲ್ಲಿ ನಾಮಪತ್ರ ಸಲ್ಲಿಕೆಯ ಮುನ್ನ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ನಾನು 4 ಬಾರಿ ಕ್ಷೇತ್ರದ ಶಾಸಕನಾಗಿದ್ದೇನೆ. ಸುಳ್ಳು ಭರವಸೆ ಕೊಟ್ಟಿಲ್ಲ. ಕ್ಷೇತ್ರದ ಅಭಿವೃದ್ದಿಗೆ ದುಡಿದಿದ್ದೇನೆ. ಕಳೆದ ಐದು ವರ್ಷದ ಅವಧಿಯಲ್ಲಿ 94ಸಿ ಹಕ್ಕುಪತ್ರ ಕೊಡಲಾಗಲಿಲ್ಲ. ಕೇವಲ ಮೂರು ಅಕ್ರಮ ಸಕ್ರಮ ಬೈಠಕ್ ಆಯಿತು. ಮೀನುಗಾರರಿಗೆ ಅಗತ್ಯದಷ್ಟು ಸೀಮೆಎಣ್ಣೆ ಕೊಡಲಾಗಲಿಲ್ಲ. ಬಂದರುಗಳ ಅಭಿವೃದ್ದಿಯಾಗಲಿಲ್ಲ, ಮೀನುಗಾರಿಕಾ ಮನೆಗಳನ್ನು ಕೊಡಲಾಗಲಿಲ್ಲ. ಕ್ಷೇತ್ರದ ನಿಜವಾದ ಅಭಿವೃದ್ದಿಗೆ ಕಾಂಗ್ರೆಸ ಪಕ್ಷಕ್ಕೆ ಅವಕಾಶ ಕೊಡಿ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭಯೋತ್ಪಾದಕರಿಗೆ ಹೋಲಿಸುತ್ತಾರೆ. ಇಂದಿರಾಗಾಂಧಿ, ರಾಜೀವ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇಂಥಹ ತ್ಯಾಗಿಗಳ ದೇಶಭಕ್ತ ಪಕ್ಷ ನಮ್ಮದು. ಯಡಮೊಗೆಯ ಉದಯ ಗಾಣಿಗ ಹತ್ಯೆ ಮಾಡಿದ್ದು ಯಾರು? ಬಿಜೆಪಿ ಪಕ್ಷದ ಗ್ರಾಮ ಪಂಚಾಯತ್ ಅಧ್ಯಕ್ಷನ ನೇತೃತ್ವದಲ್ಲಿ ಕೊಲೆಯಾಗುತ್ತದೆ. ಕೋಟದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನ ನೇತೃತ್ವದಲ್ಲಿ ಜೋಡಿ ಕೊಲೆಯಾಗುತ್ತದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರೆಲ್ಲ ಜನರನ್ನು ಎದುರಿಸಲಾಗದೇ ಓಡಿದ್ದೇಕೆ? ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಇವತ್ತು ಕಾಂಗ್ರೆಸ್ ಪಕ್ಷವನ್ನು ಆರೋಪಿಸುವ ಬಿಜೆಪಿ ಇವತ್ತು ಪರಿವಾರದ ಪಕ್ಷವಾಗಿದೆ. ಪರಿವಾರಕ್ಕೆ ಅವಕಾಶ ಕೊಡುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಅವಕಾಶ ಕೊಡದೆ ಸಂಘಪರಿವಾರದವರಿಗೆ ಟಿಕೆಟು ನೀಡಿದ್ದಾರೆ. ಇದು ಬಿಜೆಪಿಯ ವಾಸ್ತವ ಸ್ಥಿತಿ ಎಂದ ಅವರು, ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಯಾವ ಅಸ್ತ್ರವನ್ನು ಬೇಕಾದರೂ ಪ್ರಯೋಗಿಸಬಹುದು. ಮತದಾರರು ಜಾಗೃತವಾಗಿರಬೇಕು. ಬಿಜೆಪಿ ಯಾವುದೇ ಅಸ್ತ್ರ ಬೇಕಾದರೂ ಯಾವ ಕ್ಷಣದಲ್ಲಿ ಬೇಕಾದರೂ ಪ್ರಯೋಗಿಸಬಹುದು ಎಂದರು.
ಕಾಂಗ್ರೆಸ್ ಪಕ್ಷದ ವಕ್ತಾರ ವಿಕಾಸ್ ಹೆಗ್ಡೆ, ಪ್ರಚಾರ ಸಮಿತಿಯ ಪ್ರಮುಖರಾದ ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಪ್ರಕಾಶ್ಚಂದ್ರ ಶೆಟ್ಟಿ, ಎಸ್.ರಾಜು ಪೂಜಾರಿ, ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ, ರಮೇಶ ಗಾಣಿಗ ಕೊಲ್ಲೂರು, ರಘುರಾಮ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ವಿಜಯ ಶೆಟ್ಟಿ, ಗೌರಿ ದೇವಾಡಿಗ, ಮಂಜುಳ ದೇವಾಡಿಗ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್‍ನ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಎಸಿಎಫ್ ಅಧಿಕಾರಿ ಪರಮಯ್ಯ ಗೊಂಡ, ಸುಬ್ಬಣ್ಣ ಶೆಟ್ಟಿ ಶಿರೂರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಸ್ವಾಗತಿಸಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು ವಂದಿಸಿದರು.











