ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್. ಅದರಲ್ಲಿ ಇರುವ ಪ್ರಮುಖ ಐದು ಅಂಶಗಳು. ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ. ಈ ಭರವಸೆಗಳನ್ನು ಖಂಡಿತಾ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅನುಷ್ಟಾನ ಮಾಡಲಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು.
ಅವರು ಕುಂದಾಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ನೆನಗುದಿಗೆ ಬಿದ್ದಿದೆ. ಸಿಆರ್‍ಜೆಡ್, 94ಸಿ, 94ಸಿಸಿ, ಅಕ್ರಮ ಸಕ್ರಮ ಸಮಸ್ಯೆಗಳಿವೆ. ಕುಂದಾಪುರದಲ್ಲಿ ಆರ್.ಟಿ.ಓ ಕಛೇರಿ ಬೇಡಿಕೆ ಇದೆ. ಕೋಡಿ ಕನ್ಯಾಣ ಭಾಗದಲ್ಲಿ ಹಕ್ಕುಪತ್ರ ಸಮಸ್ಯೆ, ನದಿ ದಂಡೆಯ ಸಮಸ್ಯೆ, ಗಂಗೊಳ್ಳಿ-ಕುಂದಾಪುರ ಸೇತುವೆ ಬೇಡಿಕೆ, 44 ವರ್ಷಗಳಾದರೂ ಬಾಕಿ ಇರುವ ವರಾಹಿ ನೀರಾವರಿ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಉಪ ಕಾಲುವೆಗಳ ನಿರ್ಮಾಣಗೊಂಡಿಲ್ಲ. ನಾನು ಶಾಸಕನಾಗಿ ಆಯ್ಕೆಯಾದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಕುಂದಾಪುರ ಕ್ಷೇತ್ರದಲ್ಲಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬೆಂಬಲ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಸಿಗುತ್ತಿರುವ ಬೆಂಬಲ ನೋಡಿದಾಗ ಕಾಂಗ್ರೆಸ್ ಗೆಲ್ಲುವುದು ಸ್ಪಷ್ಟ ಎಂದರು.
ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಬಜರಂಗದಳದ ಪ್ರಸ್ತಾಪದ ಮಾಧ್ಯಮದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಜರಂಗದಳ ವಿರೋಧ ಸ್ಪಷ್ಟವಾಗಿ ಹೇಳಿಲ್ಲ. ಇದನ್ನು ಬಿಜೆಪಿಗರು ಹತಾಶರಾಗಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಹೇಳಲು ಬೇರೆ ವಿಷಯಗಳಿಲ್ಲ. ಚುನಾವಣೆಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಇವತ್ತು ಬಿಜೆಪಿಗರು ಸೋಲಿನ ಭಯದಿಂದ ಹತಾಸರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದು ವಿರೋಧಿಯಲ್ಲ, ನಮ್ಮ ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಅವರು ಧಾರ್ಮಿಕ ವ್ಯವಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ವರ್ಷಂಪ್ರತಿ ಶ್ರೀರಾಮ ಭಜನೆಯನ್ನು ನೆಡೆಸಿಕೊಂಡು ಬರುತ್ತಿದ್ದಾರೆ. ಪರಿಸರದ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಹಾಗಾಗಿ ಇಡೀ ಕ್ಷೇತ್ರದ ಜನರಿಗೆ ದಿನೇಶ ಹೆಗ್ಡೆ ಅವರ ವ್ಯಕ್ತಿತ್ವದ ಅರಿವಿದೆ. ಪ್ರತಿ ಚುನಾವಣೆಯಲ್ಲಿ ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಹೋಗುತ್ತಾರೆ. ಹಿಂದುತ್ವ, ಹಿಂದು ಸಂಘಟನೆಯ ಬಗ್ಗೆ ಬಿಜೆಪಿಗೆ ಅಷ್ಟೊಂದು ಅಭಿಮಾನ ಇದ್ದರೆ ಹಿಂದೂ ನಾಯಕರುಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಅವರಿಗೆ ಏಕೆ ಬೆಂಬಲ ಕೊಡಲಿಲ್ಲ. ಪುತ್ತೂರು, ಕಾರ್ಕಳದಲ್ಲಿ ಹಿಂದು ಸಂಘಟನೆಯ ಮುಖಂಡರು ಸ್ಪರ್ಧೆ ಮಾಡಿದ್ದಾರೆ. ಅವರನ್ನು ಏಕೆ ಬೆಂಬಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕುಂದಾಪುರ ಕ್ಷೇತ್ರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರ ನಾಯಕತ್ವ ಈ ಚುನಾವಣೆಯಲ್ಲಿ ಇರಬಹುದು. ಆದರೆ ಇಲ್ಲಿ ಅಭ್ಯರ್ಥಿಯ ಪರವಾಗಿ ಮತ ಕೇಳುತ್ತಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟರ ಹೆಸರು ಹೇಳಿ ಮತ ಕೇಳಲಾಗುತ್ತಿದೆ ಎಂದು ದೂರಿದರು.
ಇವತ್ತು ಅಮಾಸೆಬೈಲು ಗ್ರಾಮದಲ್ಲಿ 11 ಶಾಲೆಗಳಿದ್ದು 3 ಶಾಲೆಗಳಲ್ಲಿ ಶೂನ್ಯ ಶಿಕ್ಷಕರ ಶಾಲೆಯಾಗಿದೆ. ಅಮಾಸೆಬೈಲು ಗ್ರಾಮದಲ್ಲಿ ಹಿಂದು ರುದ್ರಭೂಮಿ ಇಲ್ಲ, ಜೂನಿಯರ್ ಕಾಲೇಜು ಬೇಡಿಕೆ ಇದೆ. ವಾರಾಹಿ ನೀರು ಅಮಾಸೆಬೈಲು ಗ್ರಾಮಕ್ಕೆ ಸಿಗುತ್ತಿಲ್ಲ. ಕೃಷಿಕರ ಪಾಡು ಹೇಳತಿರದು. ಇಷ್ಟೊಂದು ಸಮಸ್ಯೆ ಅಮಾಸೆಬೈಲು ಗ್ರಾಮದಲ್ಲಿದ್ದರೂ ಕೂಡಾ ಕಳೆದ 30 ವರ್ಷಗಳಿಂದ ಶಾಸಕರ ನಿಕಟ ಸಂಪರ್ಕ ಇರುವ ಕಿರಣ್ ಕೊಡ್ಗಿಯವರಿಂದ ಏಕೆ ಪರಿಹರಿಸಲು ಆಗಲಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕೃಷ್ಣದೇವ ಕಾರಂತ, ವಿನೋದ್ ಕ್ರಾಸ್ತ್, ಅಶೋಕ್ ಪೂಜಾರಿ ಉಪಸ್ಥಿತರಿದ್ದರು.











