ಕುಂದಾಪುರ ಮಿರರ್ ಸುದ್ದಿ…
ಉಡುಪಿ: ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ. ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕಾಲೇಜಿನ ವಿದ್ಯಾರ್ಥಿನಿಯರ ಟಾಯ್ಲೆಟ್ ಮೊಬೈಲ್ ಶೂಟಿಂಗ್ ಪ್ರಕರಣವನ್ನು ಎಸ್.ಐ.ಟಿ.ಗೆ ವಹಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪಡುಬಿದ್ರೆ ಬೀಚ್ ವೀಕ್ಷಣೆಯ ಬಳಿಕ ಮಾತನಾಡಿದರು.
ಮೊಬೈಲ್ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸ್ವಯಂ ಪ್ರೇರಿತ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಡಿ ವೈಎಸ್ಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದಾರೆ, ಕೇಂದ್ರ ಮಹಿಳಾ ಆಯೋಗದ ಸದಸ್ಯರು ಆಗಮಿಸಿ ತನಿಖೆ ಕೈಗೊಂಡು ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇರಲಿಲ್ಲ ಎಂದು ಹೇಳಿದ್ದಾರೆ. ಪ್ರಕರಣವನ್ನು ಎಸ್.ಐ.ಟಿಗೆ ವಹಿಸುವ ಪ್ರಶ್ನೆ ಉದ್ಬವಿಸುವುದಿಲ್ಲ. ತನಿಖಾ ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಅವಕಾಶವಿದೆ. ಆದರೆ ಸುಳ್ಳುಸುದ್ಧಿಗಳನ್ನು ಸರ್ಕಾರದ ವಿರುದ್ಧ ಅಥವಾ ವ್ಯಕ್ತಿಯ ವಿರುದ್ಧ ಹಬ್ಬಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ ಎಂದರು. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ.ಟಿ ಕ್ರಮವಹಿಸುತ್ತದೆ. ಕಡಲ್ಕೊರೆತ ತಡೆ ಕುರಿತಂತೆ ಶಾಶ್ವತ ಪರಿಹಾರ ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು , ಇದಕ್ಕೆ ಎಷ್ಟು ಹಣ ಬೇಕು ಎಂಬ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಅನುದಾನ ಹೊಂದಾಣಿಕೆ ಮಾಡಲಾಗುತ್ತದೆ. ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಯ ವೇತನ ಬಿಡುಗಡೆಗೆ ತಕ್ಷಣ ಸೂಚಿಸಲಾಗುವುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಂದರು ಮತ್ತು ಮೀನುಗಾರಿಕೆ ಸಚಿವ ಮಾಂಕಳು ವೈದ್ಯ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮತ್ತಿತರರು ಇದ್ದರು.











