ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಳೆದ ಹನ್ನೊಂದು ವರ್ಷಗಳಿಂದ ನನ್ನ ಮಗಳ ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಹೋರಾಡುತ್ತಾ ಬಂದಿದ್ದೇನೆ. ನ್ಯಾಯ ಸಿಗುವವರೆಗುಇ ಹೋರಾಡುತ್ತೇನೆ. ನನ್ನ ಹೋರಾಟಕ್ಕೆ ನಿಮ್ಮ ಬೆಂಬಲಬೇಕು ಎಂದು ಸೌಜನ್ಯಾ ತಾಯಿ ಕುಸುಮಾವತಿ ಹೇಳಿದ್ದಾರೆ.
ಅವರು ಶನಿವಾರ ಸಾಲಿಗ್ರಾಮದಲ್ಲಿ ಕೋಟ, ಸಾಲಿಗ್ರಾಮ, ಸಾಸ್ತಾನ ಸೌಜನ್ಯ ಹೋರಾಟ ಸಮಿತಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನನ್ನ ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ವ್ಯಕ್ತಿಗಳನ್ನು ಪತ್ತೆಹಚ್ಚಿ ಗಲ್ಲಿಗೇರಿಸಬೇಕು. ಎಲ್ಲೆಡೆ ಹೋರಾಟದ ಕಿಚ್ಚು ನನ್ನ ಮಗಳಿಗಾದ ಅನ್ಯಾಯದ ವಿರುದ್ದ ಧ್ವನಿ ಕೇಳುತ್ತಿದೆ. ಮುಖ್ಯಮಂತ್ರಿಗಳು ನ್ಯಾಯ ದೊರಕಿಸಿಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಅವರ ಪರವಾಗಿ ಹೇಳಿಕೆ ನೀಡಿದಂತಿದೆ. ಯಾರೇನೇ ಮಾಡಿದರೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಧರ್ಮದ ತಳಹದಿ ಇರುವ ಕ್ಷೇತ್ರದಲ್ಲಿ ಸೌಜನ್ಯನಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಇದಕ್ಕೆ ಅಲ್ಲಿರುವ ದೇವರುಗಳೇ ಸಾಕ್ಷಿ ಎಂದು ವಕೀಲೆ ಅಂಬಿಕಾ ಪ್ರಭು ಹೇಳಿದರು.
ಹಿಂದೂ ಸಮಾಜ ಅನ್ಯಾಯದ ವಿರುದ್ಧ ಸದಾ ಧ್ಬನಿ ಎತ್ತಿ ನ್ಯಾಯ ದೊರಕಿಸಿದ ಇತಿಹಾಸಗಳಿವೆ. ಅದೇ ರೀತಿ ಸೌಜನ್ಯ ಕುಟುಂಬಕ್ಕೂ ನ್ಯಾಯ ದೇವತೆ ಕಣ್ತೆರೆಯುತ್ತಾಳೆ. ಈ ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ಯಶಸ್ಸು ಕಾಣದು ಎಂದು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿರುವ ವ್ಯಕ್ತಿಗಳನ್ನು ಎಚ್ಚರಿಸಿದರು.
ಕ್ರೂರವಾಗಿ ಮಗಳನ್ನು ಕಳೆದುಕೊಂಡ ತಾಯಿಯ ಹೋರಾಟವನ್ನು ಹಿಮ್ಮೆಟ್ಟಿಸಲು ಕೆಲವರು ಎಟಿಎಂ ಪದ ಬಳಸುತ್ತಿದ್ದಾರೆ. ದೊಡ್ಡವರಿಗೆ ಬಕೆಟ್ ಹಿಡಿಯುವ ಭರದಲ್ಲಿ ಸಂತ್ರಸ್ಥ ಕುಟುಂಬಕ್ಕೆ ಮಸಿ ಬಳಿಯುತ್ತಾರೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರಾಷ್ಟ್ರೀಯ ಮಾನವಹಕ್ಕುಗಳ ರಾಜ್ಯ ಸಮಿತಿ ಪ್ರದಾನ ಕಾರ್ಯದರ್ಶಿ ಡಾ. ದಿನೇಶ್ ಗಾಣಿಗ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸೌಜನ್ಯ ಭಾವಚಿತ್ರಕ್ಕೆ ಪ್ರತಿಭಟನಾಕಾರರು ಪುಷ್ಭಾರ್ಚನೆಗೈದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಪ್ರತಿಭಟನಾ ಸಭೆಗೆ ಆಗಮಿಸಿತು.
ನಾಗರಾಜ ಗಾಣಿಗ ಪ್ರಾಸ್ತಾವಿಸಿದರು.
ಕುಂದಾಪುರ ಸೌಜನ್ಯ ಹೋರಾಟ ಸಮಿತಿ ಪ್ರಮುಖ ಸುಧೀರ್ ಶೆಟ್ಟಿ ಮಲ್ಯಾಡಿ, ಸೌಜನ್ಯ ಸೋದರ ಮಾವ ವಿಠ್ಠಲ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪ್ರಸಾದ್ ಬಿಲ್ಲವ ನಿರೂಪಿಸಿದರು.











