ಕೋಟತಟ್ಟಿನಲ್ಲಿ 18ನೇ ವರ್ಷದ ಕಾರಂತ ಹುಟ್ಟೂರು ಪ್ರಶಸ್ತಿ ಕಾರ್ಯಕ್ರಮ ಸಂಪನ್ನ
ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ರಿಂದ ಪ್ರಶಸ್ತಿ ಪ್ರದಾನ
ಡಾ. ವಿದ್ಯಾಭೂಷಣರಿಗೆ ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

ಕುಂದಾಪುರ ಮಿರರ್ ಸುದ್ದಿ…
ಕುಂದಾಫುರ: ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳನ್ನು ಹೊಂದಿರುವ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜನಿಸಿದ ಡಾ. ಕೋಟ ಶಿವರಾಮ ಕಾರಂತರು ಧರ್ಮ ಮತ್ತು ಸಮನ್ವತೆಯ ಪ್ರತೀಕ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದರು.
ಅವರು ಮಂಗಳವಾರ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೋಟದ ಕಾರಂತ ಥೀಂ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾದ ಕಾರಂತೋತ್ಸವದ ಸಮಾರೋಪದ ಸಂದರ್ಭ ನಡೆದ 18ನೇ ವರ್ಷದ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದ ಸಮುದ್ರ ತಟದಲ್ಲಿರುವ ಉಡುಪಿ ಜಿಲ್ಲೆಯು ಐತಿಹಾಸಿಕ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಹೆಸರುವಾಸಿಯಾಗಿದ್ದು, ಕೋಟ ಶಿವರಾಮ ಕಾರಂತರು ಮಹಾನ್ ಕನ್ನಡ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಯಕ್ಷಗಾನದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದ ಕಾರಂತರು ಸಿನೆಮಾದಲ್ಲಿಯೂ ತನ್ನ ಛಾಪು ಮೂಡಿಸಿದವರು. 400ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶಕರಾದವರು. ಸಾಹಿತ್ಯ ಕ್ಷೇತ್ರದಲ್ಲಿ ಆಧಿಕ ಭಾರತದ ರವೀಂದ್ರನಾಥ ಎಂಬ ಹೆಸರು ಪಡೆದವರು ಎಂದರು. ನಡೆದಾಡುವ ಸೈಕ್ಲೋಪೀಡಿಯಾ ಎಂದೇ ಕರೆಯಲ್ಪಡುತ್ತಿದ್ದ ಡಾ. ಶಿವರಾಮ ಕಾರಂತರು ಕಡಲತೀರದ ಭಾರ್ಗವ ಎಂಬ ಹೆಸರಿನಲ್ಲಿಯೂ ಪ್ರಸಿದ್ದರಾಗಿದ್ದರು. ಗಾಂಧೀಜಿಯವರ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ಶಿವರಾಮ ಕಾರಂತರು ಕರ್ನಾಟಕದಲ್ಲಿ ಖಾದಿ ಮತ್ತು ಸ್ವದೇಶಿಯ ಉತ್ಪನ್ನಗಳ ಪ್ರಚಾರ ಮಾಡಿದ್ದರು. ಕೋಟತಟ್ಟು ಗ್ರಾಮ ಪಂಚಾಯತ್ ಢಾ. ಶಿವರಾಮ ಕಾರಂತರ 18ನೇ ಕಾರಂತ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಸುತ್ತಾ ಬಂದಿರುವುದು ಅತೀವ ಸಂತೊಷ ತಂದಿದೆ. ಕಳೆದ ನಲ್ವತ್ತು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಡಾ, ವಿದ್ಯಾಭೂಷಣ ಅವರನ್ನು ಈ ಬಾರಿ ಸನ್ಮಾನಿಸುತ್ತಿರುವುದು ಸಂದರ್ಭೋಚಿತವಾಗಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ರಾಜ್ಯಪಾಲರನ್ನು ಬ್ಯಾಂಡ್ ವಾದ್ಯಗಳ ಜೊತೆಗೆ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಕಾರಂತ ಹುಟ್ಟೂರ ಪ್ರಶಸ್ತಿ 2023ನ್ನು ನಾಡಿನ ಖ್ಯಾತ ಸುಗಮ ಸಂಗೀತ ವಿದ್ವಾಂಸರಾದ ಡಾ. ವಿದ್ಯಾಭೂಷಣರವರಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನದ ಕಿರೀಟ ತೊಡಿಸಿ ಗೌರವಿಸಿ ಪ್ರಶಸ್ತಿ ಪ್ರದಾನಿಸಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರನ್ನೂ ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ.ಕುಂದರ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಯು.ಎಸ್ ಶೆಣೈ ಉಪಸ್ಥಿತರಿದ್ದರು. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ವಂದಿಸಿದರು. ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಮತ್ತು ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.











