ಕುಂದಾಪುರ :ವಿಶೇಷಚೇತನರಿಗೆ ತೊಂದರೆ ಕೊಡಬೇಡಿ – ಮಾಜೀ ಆಯುಕ್ತ ಕೆ.ವಿ ರಾಜಣ್ಣ

0
1054

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಂದಾಯ ಇಲಾಖೆಯಲ್ಲಿ ವಿಶೇಷಚೇತನರ ಪಿಂಚಣಿಗೆ ಸತಾಯಿಸಬೇಡಿ. ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ ಎಂದು ಅಂಗವಿಕಲ ಹಕ್ಕುಗಳ ಅಧಿನಿಯಮದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ ತಹಶೀಲ್ದಾರ್‌ಗೆ ಸೂಚಿಸಿದರು. ಅವರು ಬುಧವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮುದಾಯ ಆಧಾರಿತ ವಿಕಲ ಚೇತನ ಪುನಶ್ಚೇತನ ಕಾರ್ಯಕ್ರಮದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರು ಗ್ರಾಮಾಂತರ, ಉಡುಪಿಯಲ್ಲಿ ಮಾತ್ರ ಡಿಡಿಆರ್‌ಸಿ ಕಾರ್ಯನಿರ್ವಹಿಸುತ್ತಿದೆ. 34ರ ಪೈಕಿ 14 ಕಡೆ ಮಾತ್ರ ಅಸ್ತಿತ್ವದಲ್ಲಿದೆ. ವಿಕಲಚೇತನರಿಗೆ ಮೀಸಲಾದ ಶೇ.5 ನಿಧಿಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಸೌಲಭ್ಯಗಳನ್ನು ನೀಡಬೇಕು ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೆನ್ನುಹುರಿ ಸಮಸ್ಯೆಯಿಂದ ನರಳುತ್ತಿರುವವರಿಗೆ ಪುನರ್ವಸತಿ ಕೇಂದ್ರಕ್ಕಾಗಿ ಹೊಸಂಗಡಿಯಲ್ಲಿರುವ ಕೆಪಿಸಿ ಆಸ್ಪತ್ರೆಯನ್ನು ನೀಡಲು ಮನವಿ ಮಾಡಲಾಗಿದೆ. ಇಲ್ಲಿ ಸೇವಾಭಾರತಿ ಕನ್ಯಾಡಿ ಇದರ ಅಂಗಸಂಸ್ಥೆ ಮೂಲಕ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದರು.

Click Here

ಸರ್ಕಾರದ ಮಾನದಂಡ ಪ್ರಕಾರ ಸೌಲಭ್ಯ ಪಡೆಯಲು ಶೇ.40 ಅಂಗವೈಕಲ್ಯ ಹೊಂದಿರಬೇಕು. ಶೇ.10 ಅಂಗವೈಕಲ್ಯ ಇದ್ದರೂ ಕೆಲವೊಮ್ಮೆ ಸೌಲಭ್ಯಗಳ ಅಗತ್ಯವಿರುತ್ತದೆ. 1 ಕಣ್ಣು ಹೋದರೆ ಶೇ.36 ಎಂದು ಪ್ರಮಾಣಪತ್ರ ನೀಡಲಾಗುತ್ತದೆ. ಅಂತಹವರಿಗೆ ಕೆಲವೊಂದು ಯೋಜನೆಯಲ್ಲಿ ರಿಯಾಯಿತಿಯ ಅಗತ್ಯ ಇರುತ್ತದೆ. ಆದ್ದರಿಂದ ಈ ಮಾನದಂಡವನ್ನು ಪರಿಷ್ಕರಿಸಲು ಸರಕಾರದ ಸಂಬಂಧಪಟ್ಟವರ ಜತೆ ಮಾತನಾಡುವುದಾಗಿ ಹೇಳಿದರು.

ಕುಂದಾಪುರ ಉಪವಿಭಾಗ ಆಸ್ಪತ್ರೆಯಲ್ಲಿ ಇರುವ ಡಯಾಲಿಸಿಸ್ ವ್ಯವಸ್ಥೆಯಲ್ಲಿ ಬೈಂದೂರಿನವರನ್ನೂ ಪೂರ್ಣಪ್ರಮಾಣದಲ್ಲಿ ಒಳಗೊಳಿಸಲು ಸಾಧ್ಯವಾಗುತ್ತಿಲ್ಲ. ಬೈಂದೂರು ಆಸ್ಪತ್ರೆಗೆ ಡಯಾಲಿಸಿಸ್ ವ್ಯವಸ್ಥೆ ಸರ್ಕಾರದಿಂದ ನೀಡುತ್ತಿಲ್ಲ. ಆದ್ದರಿಂದ ಖಾಸಗಿ ಸಹಯೋಗದಲ್ಲಿ ಬೈಂದೂರು ಕ್ಷೇತ್ರದ 4 ಕಡೆ ಡಯಾಲಿಸಿಸ್ ಘಟಕ ತೆರೆಯಲಾಗುವುದು. ಹೊಸಂಗಡಿಯ ಕೆಪಿಸಿ ಆಸ್ಪತ್ರೆ, ಬೈಂದೂರಿನ ಅಂಜಲಿ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಒಂದು ಘಟಕ ಹಾಗೂ ಚಿತ್ರಕೂಟ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುವುದು. ದಾನಿಗಳ ಮೂಲಕ ಡಯಾಲಿಸಿಸ್ ಯಂತ್ರ, ನಿರ್ವಹಣೆಗೆ ನುರಿತ ಸಿಬಂದಿ ವ್ಯವಸ್ಥೆ ಮಾಡಲಾಗುವುದು ಎಂದರು.

ಶಿಕ್ಷಣ ಇಲಾಖೆಯ ಶಂಕರ ಕುಲಾಲ್ ಮಾತನಾಡಿ, ಕುಂದಾಪುರದಲ್ಲಿ 10, ಬೈಂದೂರಿನಲ್ಲಿ 12 ವಿದ್ಯಾರ್ಥಿಗಳು ಕಲಿಕಾ ನ್ಯೂನತೆಯ ಸಮಸ್ಯೆಯಲ್ಲಿದ್ದಾರೆ. ಇವರಿಗೆ ಸರ್ಕಾರಿ ಆಸ್ಪತ್ರೆಯ ಮನೋವೈದ್ಯರು ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದಾಗ ಶಾಸಕರು ತಕ್ಷಣ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಶ್ಯಾಮಲಾ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ನಿರ್ದೇಶಕಿ ರತ್ನಾ, ತಹಶೀಲ್ದಾರ್ ಶೋಭಾಲಕ್ಷ್ಮೀ, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ, ಸೇವಾ ಭಾರತಿ ಕನ್ಯಾಡಿಯ ವಿನಾಯಕ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಪುರಸಭೆ ಕಂದಾಯ ಅಧಿಕಾರಿ ಅಂಜನಿ ಮೊದಲಾದವರು ಇದ್ದರು.

Click Here

LEAVE A REPLY

Please enter your comment!
Please enter your name here