ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕಾಳಾವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಬದುಕು, ನಮ್ಮ ಉಸಿರು. ಕನ್ನಡ ಎಂದಾಗ ಜಗತ್ತಿನಾದ್ಯಂತ ಗೌರವ ವ್ಯಕ್ತವಾಗುತ್ತದೆ. ತಾಯಿ ಭುವನೇಶ್ವರಿಯ ಪಾದಸ್ಪರ್ಷದಿಂದ ಕರ್ನಾಟಕದಲ್ಲಿ ಹುಟ್ಟಿದ ನಾವು ಧನ್ಯರಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಿಕ್ಷಕ ರವಿರಾಜ್ ಶೆಟ್ಟಿ ರಾಜ್ಯೋತ್ಸವದ ಆಚರಣೆಯ ಮಹತ್ವ ಹಾಗೂ ಭಾಷಾವಾರು ಪ್ರಾಂತ್ಯಗಳ ರಚನೆಯ ಕುರಿತು ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದಿನೇಶ್ ಪ್ರಭು ಕನ್ನಡ ಭಾಷಾ ಪ್ರೀತಿ ಮತ್ತು ಸಾಹಿತ್ಯಾಸಕ್ತಿಯನ್ನು ವಿದ್ಯಾರ್ಥಿ ಜೀವನದಲ್ಲಿ ಹೇಗೆ ಬೆಳೆಸಿಕೊಳ್ಳಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಆಯ್ದ ಕನ್ನಡ ಹಾಡುಗಳು ಮತ್ತು ನೃತ್ಯ ಸಂಭ್ರಮ ನಡೆಯಿತು.











