ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ ಕಾಳಾವರ ಇಲ್ಲಿ ಚಂಪಷಷ್ಠಿ (ಹಿರಿಷಷ್ಠಿ) ಮಹೋತ್ಸವ ಡಿ.18 ರಂದು ನಡೆಯಿತು.
ತಂತ್ರಿಗಳಾದ ಕೋಟ ಶ್ರೀ ಕೃಷ್ಣ ಸೋಮಯಾಜಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಡಿ.18 ರಂದು ಉದಯ ಗಂಟೆ 4.30ರಿಂದ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ, ಉದಯ ಗಂಟೆ 5ರಿಂದ ಹಣ್ಣುಕಾಯಿ, ಹೂವುಕಾಯಿ, ಕಲಶ ಸಮರ್ಪಣೆ, ಕರ್ಪೂರ ಆರತಿ, ದೇವರ ದರ್ಶನ, ತೀರ್ಥಪ್ರಸಾದ ವಿತರಣೆ, ಪೂರ್ವಾಹ್ನ 7 ಗಂಟೆಯಿಂದ ಋತ್ವಿಜರಿಂದ ವೇದ ಪಾರಾಯಣ, ಬಳಿಕ ಮಡೆ ಪ್ರದಕ್ಷಿಣೆ, ಮಧ್ಯಾಹ್ನ 12 ಗಂಟೆಗೆ ಕಲಸಾಭಿಷೇಕ, ಮಹಾಮಂಗಳಾರತಿ, ಸಂದರ್ಶನ, ಕ್ಷೇತ್ರ ಪ್ರದಕ್ಷಿಣೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7ಗಂಟೆಯಿಂದ ನಮ್ಮಶಕ್ತಿ ಮಹಿಳಾ ಭಜನಾಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಷಷ್ಠಿ ಬಳಗ ಕಾಳಾವರ ಇವರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನಡೆಯಲಿದೆ.
ಡಿ.19ರಂದು ಬೆಳಿಗ್ಗೆ 6.30ಕ್ಕೆ ಹಾಲು ಹಿಟ್ಟಿನ ಸೇವೆ, ಬೆಳಿಗ್ಗೆ 9 ಗಂಟೆಗೆ ನಾಗಮಂಡಲೋತ್ಸವ, ಕಟ್ಟುಕಟ್ಟಳೆ ಸೇವೆ, ತುಲಾಭಾರ, ಶ್ರೀ ಕ್ಷೇತ್ರ ಪ್ರದಕ್ಷಿಣೆ, ಶ್ರೀ ಕ್ಷೇತ್ರಪಾಲನಿಗೆ ಪೂಜೆ, ಶ್ರೀ ಭೂತರಾಯ ಸ್ವಾಮಿಗೆ ತೆಂಗಿನಕಾಯಿ ಸೇವೆ, ಸಂದರ್ಶನ, ರಾತ್ರಿ 7ರಿಂದ 12ರ ತನಕ ಹಾಲಾಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎಸ್.ಚಂದ್ರಶೇಖರ ಹೆಗ್ಡೆ, ಹಾಗೂ ಸಮಿತಿ ಸದಸ್ಯರಾದ ಸತ್ಯನಾರಾಯಣ ಪುರಾಣಿಕ (ಅರ್ಚಕರು), ಭರತ್ ಕುಮಾರ್ ಶೆಟ್ಟಿ ಕಾಳಾವರ, ಮಹೇಶ ಕಾಳಾವರ, ಚಂದ್ರ ಪೂಜಾರಿ ಅಸೋಡು, ಶ್ರೀಮತಿ ಶ್ರೀಲತಾ ಎಸ್ ಕಾಳಾವರ, ಕೆ.ರಂಜಿತ್ ಕುಮಾರ್ ಶೆಟ್ಟಿ ಸಳ್ವಾಡಿ, ಶ್ರೀಮತಿ ಲಲಿತಾ ಸಳ್ವಾಡಿ, ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಬಂಧಿ, ಸಂತಾನ ಸಂಬಂದಿ, ಚರ್ಮಾದಿ ರೋಗರುಜಿನಗಳ ಸಂದರ್ಭದಲ್ಲಿ ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ಹರಕೆ ಹಾಕುವುದು ಇಲ್ಲಿ ವಿಶೇಷವಾಗಿದೆ. ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ತುಣುಕುಗಳನ್ನು ಮಾರುವ ಸಂಪ್ರದಾಯವಿದೆ. ನಾಗ(ಸುಬ್ರಮಣ್ಯನಿಗೆ) ಶೃಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಹೂವುಗಳನ್ನು ಸಮರ್ಪಿಸುತ್ತಾರೆ. ಈ ಹರಕೆ, ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಷಷ್ಠಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಈ ಭಾಗದಲ್ಲಿದೆ. ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ದೇವಸ್ಥಾನದಿಂದ ಕೆರೆಯ ಸಮೀಪದಿಂದಲೇ ಸರದಿ ಆರಂಭವಾಗಿತ್ತು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಗೊಂಡರು.










