ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ ಮೂವತ್ತು ವರ್ಷಗಳ ಹಿಂದೆ ಸರ್ಕಾರಕ್ಕೆ ನೀಡಲಾದ ಮಹಮ್ಮದ್ ಪೀರ್ ವರದಿಯಂತೆ ಕೊರಗ ಸಮುದಾಯಗಳಿಗೆ ನೀಡಲು ಬೇಕಾದಷ್ಟು ಸರ್ಕಾರೀ ಭೂಮಿ ಲಭ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರ್ ಹೇಳಿದ್ದಾರೆ. ಅವರು ನಾಡಾ – ಪಡುಕೋಣೆಯಲ್ಲಿ ನಡೆದ ಬುಟ್ಟಿ ತಯಾರಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸರ್ಕಾರೀ ಭೂಮಿಗಳ ಲಭ್ಯತೆ ಬಗ್ಗೆ ಕಂದಾಯ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿಯನ್ನು ಆಧರಿಸಿ ಭೂಮಿ ಹಂಚಿಕೆ ಮಾಡಲಾಗುತ್ತದೆ. ಇನ್ನು ಕೆಲವರು ಅಕ್ರಮ ಸಕ್ರಮದಡಿಯಲ್ಲಿಯೂ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ನಡೆಸಿ ಕಾರ್ಯಗತಗೊಳಿಸಲಾಗುತ್ತದೆ ಎಂದರು. ಮಾರಸ್ವಾಮಿ – ನಾಡಾ ರಸ್ತೆ ಸಂಪರ್ಕಕ್ಕೆ ಸೇತುವೆ ನಿರ್ಮಿಸಲಾಗಿದ್ದರೂ ಸೇತುವೆಗೆ ಸರಿಯಾದ ಸಂಪರ್ಕ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸೇನಾಪುರ ಗ್ರಾಮವನ್ನು ಹೊಸಾಡು ಪಂಚಾಯಿತಿಗೆ ಸೇರಿಸಿದ್ದರೂ ತೀವ್ರ ವಿರೋಧ ವ್ಯಕ್ತವಾಗಿದ್ದು, ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿಲ್ಲ. ಎಂದು ಕೆಲಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಪರಿಶೀಲನೆ ನಡೆಯುತ್ತಿದೆ ಎಂದರು. ಕಾರ್ಕಳದ ಪರಶುರಾಮ ಥೀಂ ಪಾರ್ಕಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಲು ನಿರಾಕರಿಸಿದರು.











